ಶನಿವಾರ, ಆಗಸ್ಟ್ 13, 2011

ನೀ ಹೇಳಿದ್ದು

ನಗುವೆಯಲ್ಲೆ ಹುಡುಗಿ,
ಸೃಷ್ಟಿ ಶೃಂಗಾರದ ಸೊಬಗಂತೆ,
ಒನಪು ಒಯ್ಯಾರದ ಬೆಡಗಂತೆ,
ಸಪ್ತಸ್ವರದ ಹೊನಲ ಹಾಡಂತೆ.

ನಗುವೆಯಲ್ಲೇ ಹುಡುಗಿ,
ಚೈತ್ರ ಚಿತ್ತಾರ ಬರೆದಂತೆ,
ಬೆಳದಿಂಗಳ ಉತ್ಸವದಂತೆ,
ಚುಕ್ಕಿ ನಗುವಂತೆ.

ನಗುವೆಯಲ್ಲೇ ಹುಡುಗಿ,
ಗಗನ ಹರ್ಷ ಸುರಿಸಿದಂತೆ,
ಹಸಿರ ಚಿಗುರು ಬಿರಿಯುವಂತೆ,
ಮಲೆನಾಡು ಮೈದುಂಬಿ ನಕ್ಕಂತೆ.

ನಗುವೆಯಲ್ಲೇ ಹುಡುಗಿ,
ತೊದಲ್ನುಡಿಯ ಜೇನಂತೆ,
ಅಂಬೆಗಾಲ ಅರಗಿಣಿಯಂತೆ,
ಪುತ್ತ ಮಗು ಚಪ್ಪಳೆತಟ್ಟಿದಂತೆ.

ನಗುವೆಯಲ್ಲೇ ಹುಡುಗಿ,
ನಗೆಯಲ್ಲೇ ಮಿಂದವಳಂತೆ,
ನಗೆಯಲ್ಲೇ ಬೆಳೆದವಳಂತೆ,
ನಗೆಯಲ್ಲೇ ಹುಟ್ಟಿದವಳಂತೆ.

ನಗು ಹುಡುಗಿ ನಗು,
ಹುಚ್ಚುಕವಿಯ, ಬಿಚ್ಚು ನುಡಿಯ
ಕೇಳುತ್ತಲೇ ನಗು;

ಹುಸಿ ಮುನಿಸಿರಲಿ,
ನಸು ಕೋಪವಿರಲಿ,
ತುಂಬು ಚೆಲುವಿರಲಿ,
ಚೆಲುವಲ್ಲರಳುವ ಒಲವಿರಲಿ.