ಗುರುವಾರ, ಏಪ್ರಿಲ್ 26, 2018

ಅಪ್ಪನಿಗಾಗಿ

ಅಪ್ಪನಿಗಾಗಿ

ದಿನವೂ ಕಾಯುತ್ತಾಳೆ ಮಗಳು
ಬಾಗಿಲು ಪಟ್ಟಿಯ ಮೇಲೆ
ತುದಿಗಾಲಲ್ಲಿ ನಿಂತು.

ಅಸ್ತವ್ಯಸ್ತ ವ್ಯವಸ್ಥೆಯ ಮಹಾನಗರಗಳು
ಜನದಟ್ಟಣೆಯ ಮಹಾನರಕಗಳು
ಗಾಳಿ-ಮಳೆಗೂ ಕೊಚ್ಚಿ ಹೋಗುವ ಗಲ್ಲಿಗಳು.

ಕಾಯುವ ಮಗಳಿಗೇನು ಗೊತ್ತು-
ಅಪ್ಪನ ಕಚೇರಿ ಯಾವ ಮೂಲೆಯಲ್ಲಿದೆಯೋ?

ಬೆಳಗಾಗುವುದನ್ನೇ ಕಾಯುವಂತಿರುವ ಅಪ್ಪ
ಮನೆಮಂದಿಯ ಮುಖ ನೋಡಲೂ ಪುರುಸೊತ್ತಿಲ್ಲದಂತೆ ಹೊರಟವನು
ಸ್ಮಶಾನಕ್ಕೆ ಹೋಗುವ
ರಸ್ತೆಯ ಗುಂಡಿಗಳನ್ನು ದಾಟಿ
ಕಚೇರಿಗೆ ಹೋಗಿ ದುಡಿದು
ದುಡ್ಡು ಬಾಚಿಕೊಂಡು ಬರುತ್ತಾನೆ!

ಮಗಳಿಗೇನು ಗೊತ್ತು-
ಈ ಊರಲ್ಲಿ ದುಡ್ಡಿಗಿಂತ ಮಣ್ಣೇ ದುಬಾರಿಯೆಂದು!

ಖರ್ಚಿನ ದಾರಿಯಲ್ಲಿ
ಮಾರಿ ತ್ರಿಶೂಲ ಹಿಡಿದು ನಿಂತಿರುತ್ತಾಳೆ-
ಶಾಪಿಂಗ್ ಶೂರ ತಾಯಿಗೆ ದುಡಿದದ್ದಷ್ಟೂ ಬೇಕು.
ಅದೆಷ್ಟು ಹೊತ್ತು ಕಚೇರಿಯ ಚೇರಿನಮೇಲೊ?
ಒಂದೊಂದು ಸೆಕೆಂಡಿಗೂ ಸಂಬಳವಂತೆ!

ಮಗಳಿಗೇನು ಗೊತ್ತು-
ಅಪ್ಪ ಮನೆ ತಲುಪುವ ಹೊತ್ತು?
(ಮಲಗಿ ನಿದ್ರಿಸಿರುತ್ತಾಳೆ ಅವಳು)

ಸೋಮವಾರ, ಏಪ್ರಿಲ್ 23, 2018

ಸ್ನಾನಕ್ಕೂ ಒಂದೇ ಬಕೀಟ್ ನೀರು ಸಾಕು!( ಹೀಗೊಂದು ಪ್ರಬಂಧ)

ಮನೆಯೊಳಗೆ ಮಗಳೊಡನೆ ಬ್ರಿಕ್ಸ್ ಜೋಡಿಸುತ್ತ ಕುಳಿತಿದ್ದವಳಿಗೆ ಕೇಳಿಸಿದ ಪಕ್ಷಿಯ ಕೂಗನ್ನು ಗಮನಿಸದೇ ಇರಲಾಗಲಿಲ್ಲ. ಬಾಲ್ಯದ ಬಹುತೇಕ ಸಮಯವನ್ನು ಹೊಳೆಯಲ್ಲೋ ಅಥವಾ ಹೊಳೆಯ ಅಂಚಿನಲ್ಲೋ ಕಳೆದವರಿಗೆ ಮಿಂಚುಳ್ಳಿ ಪರಮ ಆಪ್ತ. ಅದು ಮಿಂಚುಳ್ಳಿಯದೇ ಕೂಗೆಂದು ಹೊಳೆಯಲು ಎರಡು ಸೆಕೆಂಡ್ ಕೂಡ ಹಿಡಿಯಲಿಲ್ಲ.

ರೂಮಿಗೆ ಓಡಿದೆ. ಜೋರಾಗಿ ಓಡಿಹೋದ ನನ್ನನ್ನು ನೋಡಿ ಮಗಳಿಗೆ ಗಾಬರಿಯಾಗಿರಲಿಕ್ಕೆ ಸಾಕು. 'ದೇವರೇ! ಕ್ಯಾಮರಾದ ಬ್ಯಾಟರಿ ಕೈಕೊಡದಿದ್ದರೆ ಸಾಕಪ್ಪಾ' ಎಂದು ಬೇಡಿಕೊಳ್ಳಲೂ ಸಮಯವಿರದಂತೆ, ಕ್ಯಾಮರಾ ಆನ್ ಮಾಡಿ, ಮನೆಯ ಕಿಟಕಿಯನ್ನು ನಿಧಾನವಾಗಿ ತೆರೆದು,     ಮರದಮೇಲೆ ಕುಳಿತ ಮಿಂಚುಳ್ಳಿಯ ಚಿತ್ರವನ್ನು ಸೆರೆಹಿಡಿದಾಗ ಆದ ಖುಷಿ ಎಷ್ಟೆಂದು ನನಗಷ್ಟೇ ಗೊತ್ತು.


ಹತ್ತಿರ ಬಂದ  ಮಗಳಿಗೆ ಗಲಾಟೆ ಮಾಡದಿರುವಂತೆ ಸೂಚಿಸಿ, ಅವಳನ್ನೆತ್ತಿ ಮಿಂಚುಳ್ಳಿಯನ್ನು ತೋರಿಸಿ, ಅದು ಮೀನು ಹಿಡಿಯುವ ವಿಧಾನವನ್ನು ವಿವರಿಸಿದೆ ಮತ್ತು "ನೀನು ನೀರಾಟ ಆಡಿ ನೀರನ್ನು ಪೋಲುಮಾಡಿದರೆ, ಕೆರೆ-ಹೊಳೆಗಳ ನೀರೆಲ್ಲ ಖಾಲಿಯಾಗಿ ,ಮೀನುಗಳೆಲ್ಲ ಸತ್ತುಹೋಗಿ, ಮಿಂಚುಳ್ಳಿಗೆ ಆಹಾರವೇ ಇಲ್ಲದಂತಾಗುತ್ತದೆ" ಎಂದೆ. ಮಗಳು ನನ್ನ ಕೈಯಿಂದ ತಪ್ಪಿಸಿಕೊಂಡು ಓಡಿಹೋಗಿ, ನಮ್ಮನೆಯ ಪುಟ್ಟ ಆಕ್ವೆರಿಯಂ ಹಿಡಿದು ಬಾಲ್ಕನಿಗೆ ಹೋಗಿ ಮಿಂಚುಳ್ಳಿಯನ್ನು ಬಾ ಎಂದು ಕರೆದಳು. ಮಿಂಚುಳ್ಳಿ ಅವಳ ಕೂಗಿಗೆ ಹೆದರಿ ದೂರದ ಮರೆಕ್ಕೆ ಹೋಗಿ ಕುಳಿತುಕೊಂಡಿತು.

ನಮ್ಮ ಮನೆಯ ಐದು ಕಿಲೋಮೀಟರ್ ವ್ಯಾಪ್ತಿಯಲ್ಲೆಲ್ಲೂ ಕೆರೆಯಾಗಲಿ ಹೊಳೆಯಾಗಲಿ ಇಲ್ಲ. ಈ ಮಿಂಚುಳ್ಳಿಯೆಲ್ಲಿಂದ ಬಂತು ಎಂಬ ಯೋಚನೆ. ಎಲ್ಲೋ ನೀರಿನ ಮೂಲವನ್ನರಸಿಕೊಂಡು ಹೊರಟಿರಬೇಕು. ಗುಳೆ ಹೋಗುವ ಹಾದಿಯಲ್ಲಿ ನಮ್ಮ ಮನೆಯ ಪಕ್ಕದ ಮರದ ಮೇಲೊಮ್ಮೆ ದಣಿವಾರಿಸಿಕೊಳ್ಳಲು ಕುಳಿತಿರಬೇಕು.ಯಾರ್ಯಾರ ಕಷ್ಟಗಳು ಏನೇನೋ ಯಾರಿಗೆ ಗೊತ್ತು.
ಇಷ್ಟಾದಮೇಲೆ, ಅಂಗಳಕ್ಕೆ ನೀರು ಹಾಕಿ ಸಾರಿಸುವುದನ್ನು ಬಿಟ್ಟಿದ್ದೇನೆ; ಸ್ನಾನಕ್ಕೂ ಒಂದೇ ಬಕೀಟ್ ನೀರು ಸಾಕು!

ಬುಧವಾರ, ಏಪ್ರಿಲ್ 18, 2018

ಅಕ್ಷಯ ತೃತೀಯ

ವರುಷಗಳ ಹೊಸಕಿಹಾಕಿ ಉರುಳಿಹೋದ
ಹಲವು ವರುಷಗಳಲ್ಲಿ
ನೀನಿದ್ದೆ ಜೊತೆಗಾರ
ನನ್ನ ಬಂಗಾರ.

ಅಸ್ಪಷ್ಟ ನೆನಪುಗಳೊಡನೆ
ನಿನ್ನವೂ ಅಷ್ಟಿಷ್ಟು ಇವೆ
ಅವುಗಳನ್ನಷ್ಟೇ ನೆನೆಯುತ್ತೇನೆ
ನಾನು ನಿನ್ನೊಡನೆ.

ಬಿಡಿಸಿಕೊಂಡು ಬಂದ
ಅಮ್ಮನ ಕರುಳಿನ ಬಂಧದೊಡನೆ ಹೋಲಿಸಲಾಗದಿದ್ದರೂ
ಕಡಿಮೆಯೇನಲ್ಲ ನಿನ್ನ ಪ್ರೀತಿ
ನನ್ನೊಲವಿಗಿಂತಲೂ ಅತಿ.

ನಾಳೆಯ ನೆನೆಯದೇ
ನಿನ್ನೆಯ ಹಳಿಯದೇ
ಸವಿಯೋಣ ಈ ದಿನವ, ಬಾ ಜೊತೆಗಾರ
ನನ್ನ ಬಂಗಾರ.

ಶನಿವಾರ, ಏಪ್ರಿಲ್ 14, 2018

ಕನ್ನಡ ಪುಸ್ತಕವನ್ನೂ ಇಂಗ್ಲಿಷ್ ಮಾತನಾಡಿಯೇ ಖರೀದಿಸಬೇಕು!

ಹೇಳಿ ಹೇಳಿ ಸಾಕಾಗಿ ಹೋಗಿದೆ ನಾನೂ ಕನ್ನಡದವನೇ ಎಂದು.
ಈ ಊರಿನವರು  ಪದೇ ಪದೇ ಮರೆಯುತ್ತಾರೆ ನನ್ನನ್ನು
ಮತ್ತು
ಮರೆಯುತ್ತಾರೆ ತಾವೂ  ಕನ್ನಡದವರೇ ಎನ್ನುವುದನ್ನು!

"ಕನ್ನಡ ಮಾತಾಡಿದ್ದಕ್ಕೆ ಥ್ಯಾಂಕ್ಸ್" ಎನ್ನುವ ಟ್ಯಾಕ್ಸಿ ಚಾಲಕನೇ ಆಪ್ತನೆನ್ನಿಸುತ್ತಾನೆ,
ಪಂಜಾಬಿ ಢಾಬಾದವನನು "ಬನ್ನಿ ಬನ್ನಿ" ಎಂದು ಕರೆದುದಕ್ಕಾದರೂ ಊಟ ಮಾಡಿಬರುತ್ತೆನೆ,
ಪುಸ್ತಕ ಪರಿಷೆಗೆ ಹೋಗಿ ಕನ್ನಡದವರನ್ನು ಹುಡುಕುತ್ತೇನೆ.

ಶಾಪಿಂಗ್ ಮಾಲಿಗೆ ಹೋಗಲು ಮನಸ್ಸಾಗುವುದಿಲ್ಲ
ಎಂ ಜಿ ರೋಡ್ ಬೆಸರವೆನ್ನಿಸುತ್ತದೆ
ಮೆಜೆಸ್ಟಿಕ್ ನ ಗಡಿಬಿಡಿಯಲ್ಲಿ ಕನ್ನಡ ಮಾತಾಡುವವರಿಗೆ ಸಮಯವೆಲ್ಲಿ?

ಕನ್ನಡ ಪುಸ್ತಕವನ್ನೂ ಇಂಗ್ಲಿಷ್ ಮಾತನಾಡಿಯೇ ಖರೀದಿಸಬೇಕು!

ಒಮ್ಮೊಮ್ಮೆ ಈ ಊರಲ್ಲಿ ಕಳೆದೂ ಹೋಗುತ್ತೇನೆ
ಅಲ್ಲಲ್ಲಿ ಕಾಣುವ ಮಾಸಲಾದ ಕನ್ನಡದ ಬೋರ್ಡ್ ದಾರಿತೋರಿಸುತ್ತದೆ
ಇದು ನನ್ನ ಊರೇ ಇರಬೇಕೆಂದು ನನಗೇ ನಾನು ಹೇಳಿಕೊಳ್ಳುತ್ತೇನೆ.

ಇನ್ನು ನನ್ನ ಗೆಳತಿಯರೋ,
ಜೀನ್ಸ್ ತೊಟ್ಟು ರೋಡಿಗಿಳಿದರೆ ಕನ್ನಡ ಮರೆಯುತ್ತಾರೆ,
ಗಂಡನೊಡನೆ ಮಾತು ಬಿಟ್ಟು,
ಮಕ್ಕಳೊಡನೆ ಇಂಗ್ಲಿಷ್ ಮೆರೆಯುತ್ತಾರೆ!!

ಶುಕ್ರವಾರ, ಏಪ್ರಿಲ್ 13, 2018

ಕಾಲ


ಹರಿದು ಹೋದ ಪುಸ್ತಕದಿಂದ
ಕಥೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.

ರಾಜಕುಮಾರನ ನಗು ವಿಜ್ಞಾನಿಯ
ಆಮ್ಲದ ಜಾಡಿಯಲ್ಲಿ ಹೊಗೆಯೆಬ್ಬಿಸಿದೆ.

ಆನೆಯೇ ಅಂಬಾರಿಯ ಮೇಲೆ ಕುಳಿತು
ಮೈಸೂರಿಗೆ ಹೊರಟಿದೆ.

ತೆನಾಲಿ ರಾಮ ದುಬೈ ಶೇಖರ ಆಸ್ಥಾನದಲ್ಲಿ.

ಮುದುಕನ ಮೂವರು ಮಕ್ಕಳೂ
ಮುದುಕರಾಗಿದ್ದಾರೆ.

ಕಮ್ಮಾರ ಚಿನ್ನದಂಗಡಿ ಇಟ್ಟಿದ್ದಾನೆ.
ಗುರುಗಳು ಭರತನಾಟ್ಯವಾಡುತ್ತಿದ್ದಾರೆ.
ಶಿಷ್ಯರೋ ಯುದ್ಧಭೂಮಿಯಲ್ಲಿ!!!

ಹರಿದುಹೋದ ಪುಸ್ತಕವನ್ನು ಜೋಡಿಸಹೋದಾಗ-
ಕಲಿಗಾಲವನ್ನು ಕಂಡಂತಾಯ್ತು!!!!

ಸೋಮವಾರ, ಏಪ್ರಿಲ್ 9, 2018

ಗೆಜ್ಜೆ


ಕಳೆದುಹೋದ ಬೆಳ್ಳಿ ಕಾಲ್ಗೆಜ್ಜೆಯ ಹುಡುಕಹೋಗಲಿಲ್ಲ.
ಕುಣಿಯುವಾಗ  ಬಿದ್ದು ಕಳೆದುದಲ್ಲ,
ಕಾಡುದಾರಿಯಲ್ಲೂ ಕಳೆದುದಲ್ಲ,
ಅಲ್ಲಿ ಇಲ್ಲಿ ಇಟ್ಟು ಮರೆತುದಲ್ಲ.

ಯಾರದೋ ಕಷ್ಟಕಾಲಕ್ಕೆ
ಕೊಟ್ಟದ್ದಕ್ಕೆ ಲೆಕ್ಕ ಇಡಬೇಕೆ?
ಕೊಟ್ಟು ಕೈ ತೊಳೆದುಕೊಂಡದ್ದಕ್ಕೆ
ಕಣ್ಣೀರಿಡಬೇಕೇ?!!

ಚಲನಚಿತ್ರದಂತೆ ಸರಿದುಹೋದ
ಜೇವನದ ಚಿತ್ರಗಳ ಮೇಲೆಲ್ಲ
ಕಾಲ್ಗೆಜ್ಜೆಯ ಹೆಜ್ಜೆ ಗುರುತು ಮೂಡಿದೆ.
ಕೆಲವೊಮ್ಮೆ ಕಾಲ್ಗೆಜ್ಜೆಯ ನೆನಪು
ನನ್ನನ್ನೇ ನಾನು ಕಳೆದುಕೊಂಡಂತೆ ಮಾಡಿದೆ.

ಕೊಟ್ಟದ್ದನ್ನು ತಿರುಗಿ ಕೇಳಲಾಗದೇ,
ಪಡೆದವರನ್ನು ಮರಳಿ ಕಾಣಲಾಗದೇ
ನನ್ನಲ್ಲೇ ಅಡಗಿಸಿಟ್ಟುಕೊಂಡ ತಲ್ಲಣ -
ಕನಿಕರವೋ, ಮುನಿಸೋ, ದುಃಖವೋ,
ಇಲ್ಲಾ ಪ್ರೀತಿಯೋ?!!

ಗುರುವಾರ, ಏಪ್ರಿಲ್ 5, 2018

ವ್ಯೋಮ

ಗುಂಡಗಿನ ಗೋಳದ ಪರಿಧಿಯಾಚೆಯಲಿ
ಕಾಲವೆಂಬುದು
ಕಾಲ ಕಸವಾಗಿದೆ.

ಬೆಳಕಿಲ್ಲದ ಬೇಲಿಯಾಚೆಯ
ಆಕಾಶ ಕಾಯಗಳು
ನಿಶೆಯ ಗೂಡಾಗಿವೆ.

ಕಾಯಗಳ ತಿರುಗುವಿಕೆಗೆ
ಕಾಲವಿರದ ಕರಗುವಿಕೆಗೆ
ಜಂಗಮದ ಹೆಸರಿಟ್ಟ ವಿಶ್ವದಂಗಳದಲ್ಲಿ-
ಚರ ಯಾವುದು? ಜಡ ಯಾವುದು?!!
ನೀ ನನ್ನ ಎದುರಿರಲು
ಹೃದಯದೊಳು ಮಳೆಗಾಲ,
ನಿನ್ನ ವಿರಹದೊಳೆಲ್ಲ
ಭಾವಕ್ಕೇ ಬರಗಾಲ.

ತತ್ವ

ಹೊತ್ತಿ ಉರಿದರೆ ಕ್ರಾಂತಿ
ಆರಿಹೋದರೆ ಶಾಂತಿ
ಹುಟ್ಟು ಸಾವಿನ ನಡುವೆ
ಇಲ್ಲ ವಿಶ್ರಾಂತಿ.

ಸಾವಿಲ್ಲದ ಮನೆಯಿಲ್ಲ
ನೋವಿಲ್ಲದ ಮನವಿಲ್ಲ,
ಜೀವಿಸುವ ಸಲುವಾಗಿ
ಎಲ್ಲ ಮರೆಯಬೇಕಲ್ಲ!!

ನಾಳೆ ನಿಶ್ಚಿತವಿಲ್ಲ
ನಿನ್ನೆ ಬದಲಾಗಿಲ್ಲ
ಇಂದು-
ನಾಳಿನ ಚಿಂತೆ
ನಿನ್ನೆಯ ನೋವು!