ಬುಧವಾರ, ಅಕ್ಟೋಬರ್ 14, 2015

ಬ್ಯಾಗ್ ಬದಲಾದಾಗ(ಕಥೆ )

ಬಹುಶಹ ಅದೊಂದು ಘಟನೆ ನಡೆಯದೆ ಇದ್ದಿದ್ದರೆ, ಕಾಲೇಜು ಮುಗಿಯುವವರೆಗೂ ನನ್ನ ಮತ್ತು ಅಕ್ಕನ ಬೇಸಿಗೆ ರಜಗಳು ಮುಂಬಯಿ ಮತ್ತು ಬೆಂಗಳೂರುಗಳಲ್ಲೇ ಕಳೆಯುತ್ತಿದ್ದವೇನೊ!!!!!

ಒಮ್ಮೆ ಹೀಗಾಯಿತು...(ಒಮ್ಮೆ ಆಗಿದ್ದೇ ಸಾಕಾಗುವಷ್ಟಾಯಿತು)!!!!!!

ಮುಂಬಯಿಯ ಚಿಕ್ಕಪ್ಪನ ಮನೆಯಲ್ಲಿ 20 ದಿನಗಳ ರಜ ಕಳೆದು, ಬೆಂಗಳೂರಿನ ಮಾವನ ಮನೆಗೆಂದು ರೈಲಿನಲ್ಲಿ ಹೊರಟೆವು. ನಾನಾಗ ಪಿ ಯು ಸಿ ಮೊದಲ ವಷ೯ ಮುಗಿಸಿದ್ದು, ಅಕ್ಕ ಪದವಿಯ ಮೊದಲ ವಷ೯ ಮುಗಿಸಿದ್ದಳು. ನಮಗಿಬ್ಬರಿಗೂ ಸಾಕಷ್ಟು ವಷ೯ ಪ್ರಯಾಣದ ಅನುಭವವಿದ್ದ ಕಾರಣ ಹಿರಿಯರಾರೂ ನಮ್ಮ ಜೊತೆ ಪ್ರಯಾಣಿಸುವ ಅಗತ್ಯವಿರಲಿಲ್ಲ.

ರಾತ್ರಿ ಬಹಳ ಹೊತ್ತು ನಮಗಿಬ್ಬರಿಗೂ ನಿದ್ದೆ ಹತ್ತಲಿಲ್ಲ.ಕಾರಣವಿಷ್ಟೇ, ಒಬ್ಬ ಮಧ್ಯ ವಯಸ್ಸಿನ ವ್ಯಕ್ತಿಯ ಗೊರಕೆ! ಅಕ್ಕ ನನಗೆ ಅಲ್ಲೇ ಇರಲು ಹೇಳಿ, ತಾನೆಲ್ಲಾದರೂ ಬೇರೆ ಭೋಗಿಯಲ್ಲಿ ಜಾಗವಿದೆಯೇ ಎಂದು ನೋಡಿಬರುತ್ತೇನೆಂದಳು. ಪಕ್ಕದ ಭೋಗಿಯಲ್ಲೆ ನಾಲ್ಕೈದು ಬತ೯ಗಳು ಖಾಲಿ ಇದ್ದವು. ನಾವು ನಮ್ಮ ಏರ್ ಬ್ಯಾಗ್ ನ್ನೆತ್ತಿಕೊಂಡು ಅಲ್ಲಿಗೆ ಹೋಗಿ, ಬ್ಯಾಗನ್ನು ಬತ೯ನ ಕೆಳಗೆ ನೂಕಿ, ಹಾಯಾಗಿ ನಿದ್ದೆಹೋಗಬಹುದೆಂದುಕೊಂಡೆವು. ಮುಂದಿನ ಸ್ಟೇಶನಿನಲ್ಲಿ ಯಾರಾದರೂ ಈ ಬತ೯ಗಾಗಿ ಬಂದರೆ ಎದ್ದುಹೋದರಾಯಿತೆಂದುಕೊಂಡು, ನೆಮ್ಮದಿಯಾಗಿ ನಿದ್ದೆಹೋದೆವು.

ಬೆಳಿಗ್ಗೆ 10 ಘಂಟೆಗೆ ಬೆಂಗಳೂರು ತಲುಪುವುದಾದ್ದರಿಂದ, 9 ಘಂಟೆಗೆದ್ದ ನಾನು ಮುಖ ತೊಳೆದು ಬಂದವಳು, ಟವೆಲ್ ಸಲುವಾಗಿ ಕೆಳಗಿದ್ದ ಬ್ಯಾಗನ್ನು ಎಳೆದಾಗ - ಬ್ಯಾಗ್ ಯಾಕೋ ಬಣ್ಣ ಕಳೆದುಕೊಂಡಂತೆ/ಮಾಸಲಾದಂತೆ ಕಂಡಿತು. ರಾತ್ರಿ ತಡವಾಗಿ ಮಲಗಿ, ಬೆಳಿಗ್ಗೆ ತಡವಾಗಿ ಎದ್ದಿದ್ದರಿಂದ ತಲೆಯೆಲ್ಲ ಗುಂಯ್ ಗುಡುತ್ತಿದ್ದುದರಿಂದ ಹೀಗಾಗುತ್ತಿದೆ ಎಂದೆಣಿಸಿದೆ. ಬ್ಯಾಗಿನ ಪಕ್ಕದ ಖಾನೆಗಳಲ್ಲಿ ಟವೆಲ್ ಸಿಗಲಿಲ್ಲ. ಅಕ್ಕನಿಗೆ ಚೆನ್ನಾಗಿ ಬೈದುಕೊಂಡು, ಒಳಗೆಲ್ಲೋ ಸೇರಿಸಿ ಬಿಟ್ಟಿದ್ದಾಳೆ ಇನ್ನೆಷ್ಟು ಹುಡುಕಾಡಬೇಕೋ ಎಂದುಕೊಂಡು,ಮುಖ್ಯ ಖಾನೆಯನ್ನು ತೆರೆದರೆ ಒಳಗೇನಿದೆ.......ಬರೇ ಊದಿನಕಡ್ಡಿಯ ಪೊಟ್ಟಣಗಳು!!!!!! ನನಗೆ ಗೊತ್ತಾಗಿಹೋಯ್ತು- ನಿಜವಗಿಯೂ ಬ್ಯಾಗ್ ಬದಲಾಗಿಹೋಗಿದೆ ಎಂದು; ಯಾರೋ ನಮ್ಮ ಬ್ಯಾಗನ್ನೆತ್ತಿಕೊಂಡು ಹೋಗಿದ್ದಾರೆ ಎಂದು. ಅಕ್ಕನನ್ನೆಬ್ಬಿಸಿ ಹೇಳಿದಾಗ, ಅವಳೂ ಹೌಹಾರಿದಳು!

ನಮ್ಮ ಕಂಪಾಟ೯ಮೆಂಟ್ ನಲ್ಲಿ ಯಾರೂ ಇಲ್ಲದ್ದರಿಂದ, ನಮ್ಮ ಗಲಾಟೆಯನ್ನು ವೀಕ್ಷಿಸುವರಾರೂ ಇರಲಿಲ್ಲ ಮತ್ತು ಈ ಬ್ಯಾಗ್ ಅಲ್ಲೇ ಇರುವ ಯಾರದ್ದೋ ಆಗಿರುವ ಸಾಧ್ಯತೆ ಬಹಳ ಕಡಿಮೆಯಿತ್ತು. ನಾವಿಬ್ಬರೂ ಬಹಳ ಹೊತ್ತು ಏನು ಮಾಡಬೇಕೆಂದು ತೋಚದೆ ಸುಮ್ಮನೆ ಕುಳಿತೆವು. ಆಮೇಲೆ ನಾನೊಂದು ಊದಿನಕಡ್ಡಿಯ ಪೊಟ್ಟಣವನ್ನೆತ್ತಿಕೊಂಡೆ, ಪರಿಮಳ ಸವಿಯೋಣವೆಂದು! ಪೊಟ್ಟಣ ತೆರೆದಾಗ ಕಂಡದ್ದೇನು....ಊದಿನಕಡ್ಡಿಯ ಬದಲು, ಸಾವಿರ ರೂಪಾಯಿಗಳ ಒಂದು ಕಟ್ಟು!!!!!!ಹೌಹಾರಿದೆವು. ಎಣಿಸಿದರೆ, ಸಾವಿರ ರೂಪಾಯಿಗಳ 100 ನೋಟುಗಳು. ಇನ್ನೂ ಕೆಲವು ಪೊಟ್ಟಣಗಳನ್ನು ತೆರೆದು ನೋಡಿದರೆ, ಎಲ್ಲದರಲ್ಲೂ ಹಣವಿದೆ!! ಎಣಿಸಿದಾಗ ಕಾಣಿಸಿದ್ದು ಒಟ್ಟೂ 25 ಪೊಟ್ಟಣಗಳು- ಅಂದರೆ, 25 ಲಕ್ಷ ರೂಪಾಯಿಗಳು!!!!!!!!!

ಮತ್ತೆ ಸುಮ್ಮನೆ ಕುಳಿತೆವು, ಯೋಚಿಸಿದೆವು. ತುಂಬಾ ಕೆಳ ಧ್ವನಿಯಲ್ಲಿ ಚಚಿ೯ಸಿದೆವು. ಈ ರೀತಿ ಹಣವನ್ನು ಸಾಗಿಸುತ್ತಿದ್ದಾರೆಂದರೆ, ಯಾವುದೋ ಭೂಗತ ಲೋಕೆಕ್ಕೆ ಸಂಬಂಧಿಸಿದ್ದೆಂದು ಕಾಣಿಸುತ್ತದೆ; ಭೂಗತ ಲೋಕದಲ್ಲಿ ಹೀಗೆ - ವಸ್ತು, ಹಣ ಮತ್ತು ವಿಷಯಗಳು ಒಬ್ಬನಿಂದೊಬ್ಬನಿಗೆ ಹಸ್ತಾಂತರವಾಗುವುದಾಗಿಯೂ್- ವಸ್ತು ಎಲ್ಲಿಂದ ಬಂತು, ಎಲ್ಲಿಗೆ ಹೋಗುತ್ತಿದೆ, ಅದೆಂತಹ ವಸ್ತು ಎಂದು ಕೂಡ ಹಸ್ತಾಂತರ ಮಾಡುವ ಯಾರಿಗೂ ಗೊತ್ತಿರುವುದಿಲ್ಲವೆಂದು ಕಾದಂಬರಿಗಳಲ್ಲಿ, ಸಿನಿಮಾಗಳಲ್ಲಿ ನೋಡಿದ್ದೆವು. ಇದೂ ಹೀಗೆಯೇ ಏನೋ!! ಈ ವಿಷಯವನ್ನು ಪೋಲೀಸರಿಗೆ ತಿಳಿಸಲೂ ಭಯವಾಯಿತು. ಇನ್ನೇನು ಮಾಡುವುದು???  ನಾವು ಮೊದಲು ನಮ್ಮ ಕಳೆದುಹೋದ ಬ್ಯಾಗಿನಲ್ಲಿ  ಏನೇನಿತ್ತೆನ್ನುವುದನ್ನು ನೆನಪಿಸಿಕೊಂಡೆವು. ನಮ್ಮ ಬಟ್ಟೆಗಳು ಮತ್ತು ಚಿಕ್ಕಮ್ಮ ಡಬ್ಬಗಳಲ್ಲಿ ಕೊಟ್ಟ ತಿಂಡಿಗಳು ಮಾತ್ರ ಅದರಲ್ಲಿದ್ದವು; ಮತ್ತೆಲ್ಲ ವಸ್ತುಗಳು ನಮ್ಮ ವ್ಯಾನಿಟಿ ಬ್ಯಾಗಿನಲ್ಲಿದ್ದವು. ಬ್ಯಾಗಿನಲ್ಲಿ ನಮ್ಮನ್ನು ಗುರುತಿಸಬಹುದಾದ ಅಥವಾ ನಮ್ಮ ಬಗ್ಗೆ ಸ್ವಲ್ಪವಾದರೂ ಸುಳಿವು ಕೊಡಬಹುದಾದ ಯಾವ ವಸ್ತುಗಳೂ ಇಲ್ಲ ಎಂದು ಖಾತ್ರಿಮಾಡಿಕೊಂಡು
ಒಂದು ದಾರಿ ಹುಡುಕಿಕೊಂಡೆವು.

ಇನ್ನೇನು ನಾವಿಳಿಯುವ ಸ್ಟೇಷನ್ ಬರುವುದರಲ್ಲಿತ್ತು. ನಾವಿಬ್ಬರೂ ಬೇಗ ಮುಖ ತೊಳೆದು ಬಂದು, ವ್ಯಾನಿಟಿ ಬ್ಯಾಗಿನಲ್ಲಿದ್ದ ಕಚಿ೯ಫಿನಲ್ಲೇ ಮುಖ ಒರೆಸಿ, ಕೂದಲನ್ನೂ ಬಾಚಿಕೊಂಡೆವು. ಅಕ್ಕ ರೂ. 5,೦೦೦ ವನ್ನು ಕಂತೆಯಿಂದ ತೆಗೆದು ವ್ಯಾನಿಟಿ ಬ್ಯಾಗಿನಲ್ಲಿಟ್ಟಳು.

ಕಛೇರಿಯ ಸಮಯವಾದ್ದರಿಂದ ಮಾವನಿಗೆ ನಮ್ಮನ್ನು ಕರೆದುಕೊಂಡು ಹೋಗಲು ಬರಲಾಗಲಿಲ್ಲ. ಒಳ್ಳೆಯದೇ ಆಯಿತು. ಮೊದಲು ಆಟೊ ಹಿಡಿದು ಮಲ್ಲೇಶ್ವರಂ ಮಾಕೆ೯ಟ್ ಬಳಿ ಇಳಿದೆವು. ಅಲ್ಲಿಂದ ಸೀದಾ ಬಟ್ಟೆ ಅಂಗಡಿಗೆ ಹೋಗಿ ನಾಲ್ಕು ಜೊತೆ ಅವಶ್ಯಕ ಬಟ್ಟೆಗಳನ್ನು ಕೊಂಡೆವು. ಸಾವಿರದ ನೋಟಾದ್ದರಿಂದ, ಅಂಗಡಿಯಲ್ಲಿ ನೋಟನ್ನೊಮ್ಮೆ ಅತ್ತ ಇತ್ತ ತಿರುಗಿಸಿ ನೋಡಿದರು; ನಂತರ ತೆಗೆದುಕೊಂಡರು.
ಅವು ನಕಲಿ ನೋಟುಗಳಂತೂ ಆಗಿರಲಿಲ್ಲ! ಅಲ್ಲಿಂದ ಮುಂದೆ, ಬ್ಯಾಗ್ ಅಂಗಡಿಗೆ ಹೋಗಿ - ಈ ಬ್ಯಾಗ್ ಮತ್ತು ತೆಗೆದುಕೊಂಡ ಬಟ್ಟೆಗಳನ್ನು ಹಿಡಿಸಬಲ್ಲ ದೊಡ್ಡದೊಂದು ಬ್ಯಾಗ್ ಖರೀದಿಸಿದೆವು. ಎಲ್ಲವನ್ನೂ ಹೊಸ ಬ್ಯಾಗಿಗೆ ತುಂಬಿ, ಆಟೊ ಹಿಡಿದು, ಮಲ್ಲೇಶ್ವರಂನ ಇನ್ನೊಂದು ತುದಿಯಲ್ಲಿದ್ದ ಮಾವನ ಮನೆಗೆ ಹೊರಟೆವು.

ಮಾವನ ಮನೆ ತಲುಪಿದರೂ ನಮ್ಮ ಭಯ ಕಡಿಮೆಯಾಗಲಿಲ್ಲ. ಆ ಬ್ಯಾಗಿನ ವಾರಸುದಾರ ನಮ್ಮನ್ನು ಹುಡುಕಿಕೊಂಡು ಬಂದು ನಮಗೇನಾದರೂ ಅಪಾಯ ಮಾಡಿದರೆ!!! ಆ ಹಣವಂತು ನಮ್ಮದಲ್ಲ. ನಮಗೆ ನಮ್ಮದಲ್ಲದ ಹಣದ ತಲೆನೋವು ಬೇಕಾಗಿರಲಿಲ್ಲ. ಆದರೇನು ಮಾಡುವುದು??!! ಈಗ ತಂದಾಗಿದೆ. ರೈಲಿನಲ್ಲೇ ಬಿಟ್ಟು ಬಂದುಬಿಡಬೇಕಿತ್ತು- ಎಂದು ಇಬ್ಬರೂ ಪರಿತಪಿಸಿದೆವು. ಅತ್ತೆ-ಮಾವನಿಗೆ ಈ ವಿಷಯವನ್ನು ಹೇಳಲು ಧೈಯ೯ವಾಗಲಿಲ್ಲ.

ಎರಡು ರಾತ್ರಿ ನಮಗಿಬ್ಬರಿಗೂ ಸರಿಯಾಗಿ ನಿದ್ದೆ ಹತ್ತಲಿಲ್ಲ. ಮೂರನೆಯ ದಿನ ಏನೋ ತರುವ ನೆಪವೊಡ್ಡಿ, ಇಲ್ಲೇ ಅಂಗಡಿಗೆ ಹೋಗುತ್ತೇವೆಂದು ಅತ್ತೆಗೆ ಹೇಳಿ, ಮನೆಗೆ ದೂರವಾಣಿ ಕರೆ ಮಾಡಲು ಹೊರಬಿದ್ದೆವು. ಕರೆ ತೆಗೆದುಕೊಂಡ ಅಪ್ಪನಿಗೆ ವಿಷಯ ತಿಳಿಸಿದೆವು.  ವಿಷಯ ತಿಳಿದ ಅಪ್ಪ ಸುಸ್ತಾಗಿಹೋದ! ನಾಳೆ ಮತ್ತೆ ಕರೆ ಮಾಡಲು ಹೇಳಿದ; ಅಷ್ಟೊತ್ತಿಗೆ ಅಮ್ಮನ ಜೊತೆ ಚಚಿ೯ಸಿ ಒಂದು ನಿಧಾ೯ರಕ್ಕೆ ಬರುವೆನೆಂದ. ನಮಗೆ ಸ್ವಲ್ಪ ನಿರಾಳವಾಯಿತು. ರಾತ್ರಿ ಸ್ವಲ್ಪ ನಿದ್ದೆ ಬಂತು. ಮಾರನೆಯ ದಿನ ನಾವು ಕರೆ ಮಡಿದಾಗ, ಏನಾದರೂ ನೆಪ ಹೇಳಿ ಇನ್ನು ನಾಲ್ಕು ದಿನಗಳಲ್ಲಿ ಮನೆಗೆ ಹೊರಟುಬಿಡುವಂತೆ ನಮಗೆ ಹೇಳಲಾಯಿತು.

ಆವತ್ತು ಮೇ ೫. ನಾನಾಗ ದ್ವಿತೀಯ ಪಿಯುಸಿಗೆ ಕಾಲಿಡುತ್ತಿದ್ದುದರಿಂದ, ನಮಗೆ ಮೇ ೧೫ ರಿಂದಲೇ ತರಗತಿಗಳು ಪ್ರಾರಂಭವಗುವವೆಂದು ಮಾವನಿಗೆ ಹೇಳಿ, ಮೇ ೧೦ ಕ್ಕೆ ಊರಿಗೆ ಹೊರಡಲು ಬಸ್ ಟಿಕೆಟ್ ಖಾತ್ರಿಮಾಡಿಕೊಂಡೆವು.

ಮೇ ೧೦ರ ರಾತ್ರಿ ಬಸ್ ಹತ್ತಿ ಹಣದ ಗಂಟು ತುಂಬಿದ ಬ್ಯಾಗನ್ನು ನಮ್ಮ ಸೀಟಿನ ಕೆಳಗೇ ಇಟ್ಟುಕೊಂಡೆವು. ರಾತ್ರಿ ನಾವಿಬ್ಬರೂ ಕಣ್ಣು ಮುಚ್ಚಲಿಲ್ಲ- ಭಯಕ್ಕೋ, ಸಂಕಟಕ್ಕೋ, ಅಪರಾಧಿ ಭಾವನೆಗೋ!!!!!!

ಮನೆ ತಲುಪಿದ ಮೇಲೆ ಸಾಕಷ್ಟು ನಿರಾಳವೆನಿಸಿತು. ನಮ್ಮ ಜವಾಬ್ದಾರಿ ಅಲ್ಲಿಗೆ ಮುಗಿಯಿತು. ಅಪ್ಪ ಆಗಲೇ ಯೋಚಿಸಿದ್ದ- ಈ ಹಣವನ್ನು ಟ್ರಂಕಿನಲ್ಲಿ ಭದ್ರವಾಗಿ ಇಡುವುದೆಂದು; ಕೆಲಸಮಯ ಇದರ ವಾರಸುದಾರರಿಗಾಗಿ ಕಾಯೋಣವೆಂದು.......................................................................................................................................................................................................................................

3 ವಷ೯ ಕಳೆಯಿತು. ಹಣ ಹಾಗೇ ಉಳಿಯಿತು. ವಾರಸುದಾರ ಬರಲಿಲ್ಲ. ಆ ವಷ೯ ಅಕ್ಕನ ಮದುವೆಯಾಯಿತು. ಮದುವೆಯಲ್ಲಿ ರೂ. 5೦,೦೦೦ ಕಡಿಮೆಬಿದ್ದಾಗ, ಟ್ರಂಕಿನಿಂದ ರೂ. 5೦,೦೦೦ ವನ್ನು ತೆಗೆಯಲಾಯಿತು. ಮಾರನೆ ವಷ೯ ಅಷ್ಟೇ ಹಣವನ್ನು ತಿರುಗಿ ಟಂಕಿನಲ್ಲಿಟ್ಟರು.

ನಮಗೆಲ್ಲಾ ಗೊತ್ತಾಗಿ ಹೋಗಿತ್ತು; ಇನ್ನು ಯಾರೂ ಈ ಹಣ ಹುಡುಕಿಕೊಂಡು ಬರಲಾರರು, ಅದೂ 4 ವಷ೯ಗಳಾದ ಮೇಲೆ! ಆದರೂ ಯಾರದೋ ಹಣವನ್ನು ಖಾಚು೯ಮಾಡಲು ಅಪ್ಪನಿಗೆ ಮನಸ್ಸಿರಲಿಲ್ಲ. ನಮಗೆ ಆ ಹಣ ಉಪಯೋಗಿಸಿದಾಗ ಜನರ ಕಣ್ಣಿಗೆ ಬೀಳುವ ಭಯವೂ ಇತ್ತು.

ಅಕ್ಕನ ಮದುವೆಯಾದ ಮಾರನೆ ವಷ೯ ಅಕ್ಕ-ಭಾವ ಬೆಂಗಳೂರಿನ ಮಾವನ ಮನೆಗೆ ಒಂದು ವಾರದ ಮಟ್ಟಿಗೆ ಹೋಗುವಾಗ-ಅವರ ಕೈಲಿ ರೂ.1೦ ಲಕ್ಷ ಕೊಟ್ಟು ಅಪ್ಪ ಹೇಳಿದ- ’ ಈ ನೋಟಿನ ರೂಪದ ಹಣ ಒಂದು ದಿನ ಹಾಳಾಗಿ ಹೋಗುತ್ತದೆ. ಅದಕ್ಕೆ ಬದಲಾಗಿ ಚಿನ್ನವನ್ನು ಖರೀದಿಸಿ ತನ್ನಿ. ಇಡುವುದು ಸುಲಭವಾಗುತ್ತದೆ’. ಬೆಂಗಳೂರಿನ  ಹತ್ತು ಬೇರೆಬೇರೆ ಆಭರಣ ಮಳಿಗೆಗಳಿಂದ, ರೂ.1೦ ಲಕ್ಷಗಳ ಚಿನ್ನ ಖರೀದಿಯಾಯಿತು; ಟ್ರಂಕನ್ನು ಸೇರಿತು! ಇನ್ನುಳಿದದ್ದು ರೂ. 14,95,೦೦೦.

ಸ್ನಾತಕೋತ್ತರ ಪದವಿಗಾಗಿ ನಾನು ಧಾರವಾಡ ಸೇರಿದ ಮೇಲೆ ರೂ. 5 ಲಕ್ಷಗಳನ್ನು ಚಿನ್ನವಾಗಿ ಪರಿವತಿ೯ಸಲಾಯಿತು; ಟ್ರಂಕಿಗೆ ಸೇರಿಸಲಾಯಿತು. ನಾವ್ಯಾರೂ ಆ ಹಣದಲ್ಲಿ ಒಂದು ಪೈಸೆಯನ್ನೂ ನಮ್ಮ ಸ್ವಂತಕ್ಕಾಗಿ ಉಪಯೋಗಿಸಿಕೊಳ್ಳಲಿಲ್ಲ. ಅಪ್ಪನಿಗೆ ತಾನು ದುಡಿದ ಹಣವನ್ನು ಬಿಟ್ಟು ಬೇರೆಯದನ್ನು ಉಪಯೋಗಿಸಲು ಮನಸ್ಸಿರಲಿಲ್ಲ. ನಮಗೂ ಸಾಕಷ್ಟು ತಿಳಿಹೇಳಿದ್ದ- ಆತ್ಮವಂಚನೆ ಒಳ್ಳೆಯದಲ್ಲವೆಂದು.

ನಾನು ಬೆಂಗಳೂರಿಗೆ ಉದ್ಯೋಗ ಅರಸಿ ಬಂದಮೇಲೆ ಉಳಿದ ರೂ. 1೦ ಲಕ್ಷಗಳನ್ನು ಬೆಂಗಳೂರಿನಲ್ಲೂ, ರೂ. 95.೦೦೦ ಗಳನ್ನು ಊರಿನಲ್ಲೂ ಚಿನ್ನವಾಗಿ ಪರಿವತಿ೯ಸಿ ಟ್ರಂಕಿಗೆ ಸೇರಿಸಲಾಯಿತು.
ಟ್ರಂಕ್ ನಿಧಾನವಾಗಿ ತುಕ್ಕು ಹಿಡಿಯಲು ಪ್ರಾರಂಭಿಸಿತ್ತು.ಹೀಗಾಗಿ ರೂ.೨೫ ಲಕ್ಷ ಮುಖಬೆಲೆಯ ಚಿನ್ನವನ್ನು ಒಂದು ಪ್ಲಾಸ್ಟಿಕ್ ಡಬ್ಬಿಗೆ ವಗಾ೯ಯಿಸಲಾಯಿತು. ವಗಾ೯ಯಿಸುವಾಗ ನಾನೂ ಅಲ್ಲೇ ಇದ್ದೆ-ಎಷ್ಟೊಂದು ಹಾರಗಳು, ಬಳೆಗಳು, ಉಂಗುರಗಳು, ಕಿವಿಯೋಲೆಗಳು!!!!!!!

ಮೊದಲಬಾರಿಗೆ ಬೆಂಗಳೂರಿನಲ್ಲಿ ಅಕ್ಕ-ಭಾವ ರೂ.1೦ ಲಕ್ಷಗಳನ್ನು ಪರಿವತಿ೯ಸಿದಾಗ 2,೦೦೦ ಗ್ರಾಂ ಚಿನ್ನ ಖರೀದಿಯಾಗಿತ್ತು. ಧಾರವಾಡದಲ್ಲಿ ರೂ. 5 ಲಕ್ಷಗಳು 5೦೦ ಗ್ರಾಂ ಚಿನ್ನವಾಗಿ ಬದಲಾದವು. ನಂತರ, ಬೆಂಗಳೂರಿನಲ್ಲಿ ಮತ್ತೆ ರೂ.1೦ ಲಕ್ಷಗಳು 4೦೦ ಗ್ರಾಂ ಚಿನ್ನವಾಗಿಯೂ, ಊರಿನಲ್ಲಿ ರೂ.95,೦೦೦ ಗಳು 35 ಗ್ರಾಂ ಚಿನ್ನವಾಗಿಯೂ ಪರಿವತ೯ನೆಗೊಂಡವು.

ನನ್ನ ಮದುವೆಯಲ್ಲಿ ಫೋಟೊದಲ್ಲಿ ಸುಂದರವಾಗಿ ಕಾಣಲು ನನಗೊಂದಿಷ್ಟು ಆಭರಣಗಳು ಬೇಕಿದ್ದವು. ರೋಲ್ಡ್ ಗೋಲ್ಡ್ ಖರೀದಿಸಲು ಹೋದರೂ, ಏನಿಲ್ಲವೆಂದರೂ, ಎರಡರಿಂದ ಮೂರು ಸಾವಿರ ರೂಪಾಯಿಗಳು ಖಚಾ೯ಗುತ್ತಿದ್ದವು. ಹೀಗಾಗಿ ಅಪ್ಪನಿಗೆ ಪೆಟ್ಟಿಗೆಯಿಂದ ಒಂದೆರಡು ಹಾರ ಮತ್ತು ಬಳೆಗಳನ್ನು ತೆಗೆದುಕೊಡಲು ಹೇಳಿದೆ. ಎರಡು ದಿನಗಳ ಮಟ್ಟಿಗೆ ರೋಲ್ಡ್ ಗೋಲ್ಡ್ ಎಂದು ಕರೆಸಿಕೊಳ್ಳಲು ಹೊರಟವು ಚಿನ್ನದ ಆಭರಣಗಳು!! ಮೊದಲ ಬಾರಿಗೆ ಆ ಆಭರಣಗಳನ್ನು ಉಪಯೋಗಿಸುವ ಅವಕಾಶ ನನ್ನದಾಯಿತು.

ಮದುವೆ ಮನೆಯಲ್ಲಿ ಕಳ್ಳತನಗಳು ಜಾಸ್ತಿ ಎಂದು, ಅಪ್ಪ ಆ ಚಿನ್ನದ ಡಬ್ಬವನ್ನು ಬ್ಯಾಂಕ್ ಲಾಕರ್ ನಲ್ಲಿರಿಸಿದರು. ಮದುವೆ ಮುಗಿದ ಒಂದು ವಾರಕ್ಕೆ ನಾನು ರೋಲ್ಡ್ ಗೋಲ್ಡ್ ಹೆಸರಿನಿಂದ ಉಪಯೋಗಿಸಿದ ಚಿನ್ನವೂ ಲಾಕರ್ ಸೇರಿತು.

ಇದಾಗಿ ಎರಡು ವಷ೯ಗಳಾದರೂ ಇನ್ನು ಒಮ್ಮೆಯೂ ಲಾಕರನ್ನು ತೆರೆದಿಲ್ಲ. ಯಾರದೋ ಹಣ, ಚಿನ್ನವನ್ನು ಕಾಯಲು, ಅಪ್ಪ ಬ್ಯಾಂಕ್ ಲಾಕರ್ ಫೀಯನ್ನು ತಮ್ಮ ಸ್ವಂತ ಹಣದಿಂದ ಕಟ್ಟುತ್ತಿದ್ದಾರೆ. ಆದರೆ, ಯಾರದೋ ಹಣ ನಮ್ಮ ಕಷ್ಟಕಾಲದಲ್ಲಿ ನೆರವಾಗಿದೆ. ಆ ಹಣ ಕೈಗೆ ಬಂದು 11 ವಷ೯ಗಳಾಗಿವೆ. ಇನ್ನು ಅದರ ವಾರಸುದಾರ ಬಂದು ಅದನ್ನು ತಿರುಗಿ ಕೇಳುತ್ತಾನೆನ್ನುವ ನಂಬಿಕೆ ನಮಗಾರಿಗೂ ಇಲ್ಲ.

ಹೀಗಾಗಿ ನಮ್ಮ ಜೀವನದಲ್ಲಿ ನಮಗೊಂದು ಹಣಕಾಸಿನ ಭದ್ರತೆಯಿದೆ. 25 ಲಕ್ಷ ರೂಪಾಯಿಗಳೀಗ 75 ಲಕ್ಷ ರೂಪಾಯಿ ಬೆಲೆಯ ಚಿನ್ನದ ರೂಪದಲ್ಲಿವೆ. ಹಾಗೂ ಒಮ್ಮೆ ಅದರ ವಾರಸುದಾರ ಬಂದು ಹಣವನ್ನು ತಿರುಗಿ ಕೇಳಿದರೆ, ಕೊಡಬೆಕಾದದ್ದು ರೂ.25 ಲಕ್ಷಗಳಷ್ಟೇ!!! ಇನ್ನು ನಮಗೆ ಮಿಕ್ಕುವ ಭದ್ರತೆ ರೂ.5೦ ಲಕ್ಷಗಳಷ್ಟು. ನಾವ್ಯಾರೂ ಆ ಹಣವನ್ನು ಉಪಯೋಗಿಸುವುದಿಲ್ಲವೆಂದು ಗೊತ್ತು! ಆದರೂ, ಹಣಕಾಸಿನ ಭದ್ರತೆ ನಮ್ಮನ್ನು ಇನ್ನಷ್ಟು ಸುಖಿಗಳನ್ನಾಗಿಸಿದೆ.

ಟಿಪ್ಪಣಿ: ಇದೊಂದು ಕಾಲ್ಪನಿಕ ಕಥೆಯಾಗಿದ್ದು, ಕಥೆಯಲ್ಲಿ ಸಿಗುವ ಹಣ, ಒಡವೆಗಳೆಲ್ಲವೂ ನಿಜ ಜೀವನದಲ್ಲಿ ಇರುವುದಿಲ್ಲ!!!!!!!