ಗುರುವಾರ, ಅಕ್ಟೋಬರ್ 31, 2019

ವೃತ್ತದೊಳಗಿನ ಬೇರೆ ಬೇರೆ ಪರಿಧಿಗಳಲ್ಲಿ
ಸುತ್ತುತ್ತಿದ್ದೇವೆ ನಾವು
ಒಂದೇ ರಸ್ತೆಯ ಬೇರೆ ಬೇರೆ ಬದಿಗಳಲ್ಲಿ
ಒಂದೇ ನೀರಿನ ಬೇರೆ ಬೇರೆ ಹನಿಗಳಲ್ಲಿ
ನಾನು ಒಂಟಿಯಾಗಿ
ನೀನೂ ಒಂಟಿಯಾಗಿ
ತೊಡಕಿಲ್ಲದೆ ಜರುಗುವ
ಸಮಾರಂಭದಂತೆ
ನಾವು ನಮ್ಮ ಕಕ್ಷೆಗಳಲ್ಲೇ
ಕಳೆದುಹೋಗಿದ್ದೇವೆ.

ಈ ಊರಿನ ಬೇರೆಬೇರೆ ಗಲ್ಲಿಗಳನ್ನು
ಬೇರೆಬೇರೆ ಸಮಯಗಳಲ್ಲಿ ಸುತ್ತಿ
ಸುಸ್ತಾಗಿದ್ದೇವೆ
ನಾನು ಒಂಟಿಯಾಗಿ
ನೀನೂ ಕೂಡ ಒಂಟಿಯಾಗಿ
ಯಾವುದೋ ಮುಳ್ಳು ಬೇಲಿ
ಬದಿಯ ನೀಲಿ ಹೂವು ಕಂಡು
ಬೆರಗಾದಗಿದ್ದು ಕೂಡ
ಬೇರೆ ಬೇರೆ ಸಮಯದಲ್ಲೇ.

ಮುಗಿದುಹೋದ ಹಗಲಿನ ಕತ್ತಲಲ್ಲಿ
ನಡೆಯುವಾಗ ಎಡವಿ ಬಿದ್ದು
ಒಬ್ಬರಿಗೊಬ್ಬರು ಕೈಹಿಡಿದು
ಎಬ್ಬಿಸಿ ಸಂತೈಸಿ ಮಾತನಾಡಿಯೂ ಸಹ
ಬೇರೆಬೇರೆಯಾಗಿಯೇ ಉಳಿಯುತ್ತೇವೆ;
ಕತ್ತಲಿಗೇನುಗೊತ್ತು
ನಾವು ಒಬ್ಬರಿಗೊಬ್ಬರು ಮೋಹಿಸುವುದು
ನಮ್ಮ ಅಜ್ಞಾತ ಪ್ರೇಮವೂ
ನಮ್ಮನ್ನು ಕೂಡಿಸುವುದಿಲ್ಲ.


ಗುರುವಾರ, ಅಕ್ಟೋಬರ್ 24, 2019

ನನ್ನನ್ನೇ ನಾನು ತಳ್ಳಿಕೊಳ್ಳುವ ಆಳದಲ್ಲಿ
ನಿನ್ನ ಕಳೇಬರದ ಕುರುಹುಗಳಿವೆ.

ನಾನಾಗಿಯೇ ಸಿಕ್ಕಿಹಾಕಿಕೊಳ್ಳುವ
ಹೊರಬರಲಾಗದ ಇಕ್ಕಟ್ಟಿನಲ್ಲಿ
ನಿನ್ನ ಕೊನೆಯ ಉಸಿರಿನ ಪರಿಮಳ
ನನ್ನನ್ನು ಪೀಡಿಸುತ್ತದೆ.

ನೀನು ಇಲ್ಲದಿರುವುದಕ್ಕೆ
ಸಾಕ್ಷಿ ಎಂಬಂತೆ ನಾನು ಅಳುತ್ತಿರುತ್ತೇನೆ.

ನಿನ್ನ ಮರಣಪತ್ರದಲ್ಲಿ
ನನ್ನ ಹೆಸರೂ ಸೇರಿಸಿಕೊಳ್ಳಬೇಕೆನಿಸುತ್ತದೆ
ನನಗೆ ನಾನೇ ಸಾವನ್ನು ಬರೆದುಕೊಳ್ಳುತ್ತೇನೆ
ಮತ್ತೆ ಮತ್ತೆ ನನ್ನನ್ನು ನಾನೇ ತಳ್ಳಿಕೊಳ್ಳುತ್ತೇನೆ.

ಮತ್ತೆ ಮತ್ತೆ ಮೃತ್ಯುವಿನ ಕೈಹಿಡಿದು
ನನ್ನನ್ನು ಜೀವದ ಜೋಳಿಗೆಯಲ್ಲಿ
ಬಿಟ್ಟುಹೋಗುವ ಆಟದಲ್ಲಿ
ನಿನ್ನ ಕೈವಾಡವಿರಲಿಕ್ಕಿಲ್ಲ.

ನಾನು ಬದುಕಿರುವಷ್ಟು ದಿನವೂ
ನಿನ್ನ ನೆನಪೂ ಬದುಕಿರುತ್ತದೆ.


ಶುಕ್ರವಾರ, ಅಕ್ಟೋಬರ್ 18, 2019

ಪರಿಮಳದ ನಕಾಶೆ

ಪರಿಮಳದ ನಕಾಶೆಯ ಬಿಂದುವೊಂದರಲ್ಲಿ
ನಿಂತು ನಗುತ್ತಿದ್ದಾನೆ ಹುಡುಗ
ನನ್ನ ಹುಡುಕಾಟದ ಹತಾಶೆಯ ಕಂಡು.

ಆ ದಾರಿ ಈ ದಾರಿ ಎಂದು ನಾನು
ಮೂಗು ಅರಳಿಸಿಕೊಂಡು
ಚಲಿಸಿ ಚಲಿಸಿ ಸೋತು
ತಲುಪಲಾಗದ ಸ್ಥಳಗಳನ್ನೆಲ್ಲ
ಪಿಂಡಿ ಕಟ್ಟಿ ಒಗೆದರೆ ಹಿಡಿದುಕೊಳ್ಳುತ್ತಾನೆ
ಅವನು ಬಂದು.

ಪ್ರತೀ ಹಾದಿಯ ಪರಿಮಳವನ್ನೂ
ಅಳೆದು ರಚಿಸಿದ ನಕಾಶೆಯ
ಅವನು ಅಲ್ಲಗಳೆಯುತ್ತಾನೆ;
ಬೇಸತ್ತು ನಿಟ್ಟುಸಿರಿಟ್ಟು
ಅವನು ಕದಡುವ ಗಾಳಿ
ನಕಾಶೆಯ ಅಸ್ತಿತ್ವವನ್ನು ಹಾಳುಮಾಡುತ್ತದೆ.

ನಾನು ಸದಾ ಹುಡುಕುವ ಅವನೂ
ಒಂದು ಪರಿಮಳವೇ ಆಗಿದ್ದಾನೆ.

ನಕಾಶೆಯ ಒಂದೇ ಬಿಂದುವಿನಲ್ಲಿ
ಅವನನ್ನು ಹಿಡಿದಿಡಲಾಗುವುದಿಲ್ಲ;
ಬಿಡದೇ ಹುಡುಕುತ್ತಿರಬೇಕು
ಅವನ ಬಿಡರಾವನ್ನು
ಅವನನ್ನು ಹುಡುಕದೇ ಇರಲಾಗುವುದಿಲ್ಲ.