ಗುರುವಾರ, ಫೆಬ್ರವರಿ 22, 2018

ಅರಿವಿಗೆ ಮೀರಿದ್ದು


ಸಾವಿಗೆ ಜಿನುಗಿದ ಕಣ್ಣೀರು
ಖಾಲಿತನದ ಬಿರುಗಾಳಿಯನ್ನೆಬ್ಬಿಸಿದೆ.
ಸಾವೆಂಬ ಪ್ರಶ್ನೆಗೆ ಉತ್ತರವಿಲ್ಲವೇ?!!

ಮುಚ್ಚಿದ ಕಣ್ಣು ಮಣ್ಣು ಕಾಣುವವರೆಗಷ್ಟೇ
ನನ್ನ ಜ್ಞಾನ.

ಕಣ್ಣು ಮುಚ್ಚಿ ತಪಸ್ಸಿಗೆ ಕುಳಿತರೆ
ಕಂಡದ್ದೆಲ್ಲ ನನ್ನ ಅರಿವಿನದೇ ಪರಿಷ್ಕೄತ ರೂಪ,
ಮಿಕ್ಕಿದ್ದೆಲ್ಲ ಕತ್ತಲೆಯ ಕೂಪ.
ಜ್ಞಾನೋದಯದಲ್ಲೂ ಸಾವಿನಾಚೆ ಕಂಡಿರಲಿಕ್ಕಿಲ್ಲ!!

ಸಾವಿನಾಚೆಯೇನೆಂದು ಗೊತ್ತಿದ್ದರೆ
ಜೀವನ ಪ್ರೀತಿ ಕಡಿಮೆಯಿರುತ್ತಿತ್ತೇನೋ?!

ಹೊತ್ತು


ಕೆಲಸದಿಂದ ಕಿತ್ತೊಗೆಯಿರಿ ನನ್ನನ್ನು!
ಪುಟ್ಟ ಮಗುವಿನೊಡನೆ ಹೊತ್ತು ಕಳೆಯಬೇಕಿದೆ.

ರಾತ್ರಿ ಮಗ್ಗುಲಲ್ಲಿ ಮಲಗಿದ ಮಗು
ದಾಯೀಮಾ ಬೇಕೆಂದು ರಚ್ಚೆಹಿಡಿದಾಗ,
ನಾನೇ ತಾಯಿಯಾಗಿದ್ದೂ
ತಾಯಿಯಾಗದ ಪರಿ ಪರಿತಪಿಸುವಂತಾಗಿದೆ.
ಕೆಲಸದಿಂದ ಕಿತ್ತೊಗೆಯಿರಿ ನನ್ನನ್ನು!

ಬೆಳಿಗ್ಗೆ ನಿದ್ದೆಯಲಿರುವ ಮಗುವಿಗೆ
ಮುತ್ತು ಕೊಟ್ಟು ಹೊರಟರೆ,
ರಾತ್ರಿ ಬಂದು ಮಲಗಿದ ಮಗುವಿನ ಮಗ್ಗುಲಲ್ಲಿ
ನಿದ್ದೆ ಬಾರದೇ ಕಣ್ಣು ಒದ್ದೆಯಾಗಿದೆ.
ಕೆಲಸದಿಂದ ಕಿತ್ತೊಗೆಯಿರಿ ನನ್ನನ್ನು!

ಯಾವ ಅನಿವಾರ್ಯತೆಗೆ ಗುರಿಯಾಗಿ
ದುಡಿಯುತ್ತಿದ್ದೇನೆ?!
ಇನ್ಯಾವಾಗ ಪುಟ್ಟ ಮಗುವಿನಲ್ಲಿ
ನನ್ನ ಬಾಲ್ಯವನ್ನು ಕಾಣುವುದು?!

ದುಡಿದ ದುಡ್ಡು ನಾಳೆಗೆ ಉಳಿದೀತು,
ಕಳೆದು ಹೋದ ಸಮಯ
ಕಳೆದು ಹೋದೀತು;
ದುಡ್ಡಿನಿಂದ ಸಮಯ ಕೊಳ್ಳಲಾಗದಿದ್ದರೂ,
ಸಮಯದಿಂದ ಸಂತೋಷವನ್ನು ಕಂಡೇನು!!

ಮಗುವಿನೊಡನೆ ಆಡುವ ಸಮಯ
ಸರಿದುಹೋದರೆ ಮತ್ತೆ ಬಾರದು!!
ಕೆಲಸದಿಂದ ಕಿತ್ತೊಗೆಯಿರಿ ನನ್ನನ್ನು!!


ಬುಧವಾರ, ಫೆಬ್ರವರಿ 21, 2018

ನೆನಪಾಗಿದೆ


ಗಾಳಿ ಸುಳಿದು ಸುಳಿದು
ಸವಕಲಾದ ಕಿರುದಾರಿಯಲಿ
ನೀನು ಸುಳಿದಾಡಿದ್ದು ಮತ್ತೆ ನೆನಪಾಗಿದೆ.

ಚಳಿಗೆ ಮುಖವೊಡ್ಡಿ
ಬಿರುಕಾದ ತುಟಿಯಿಂದ
ನೀನು ಗುನುಗುತಿದ್ದ ಹಾಡು ಮತ್ತೆ ನೆನಪಾಗಿದೆ.

ಗೆಜ್ಜೆಕಟ್ಟಿ ಕುಣಿಯುವಾಗ
ಬಯಲೆಲ್ಲ ಹೆಜ್ಜೆ ಗುರುತಿಗೆ
ಗುರಿಯಾಗಿದ್ದು ಮತ್ತೆ ನೆನಪಾಗಿದೆ.

ಹಿಗ್ಗಿ ಹಿಗ್ಗಿ ನಕ್ಕು
ನೀನು ನನ್ನ ಹಿಗ್ಗಿಸಿದ್ದು ಮತ್ತೆ ನೆನಪಾಗಿದೆ.

ಅತ್ತೂ ಕರೆದು
ನೀನು ನನ್ನ ಪ್ರೀತಿಸಿದ್ದು ಮತ್ತೆ ನೆನಪಾಗಿದೆ.

ಕಾಲದ ಸುಳಿಯಲ್ಲಿ ಸಿಕ್ಕಿ
ಈಗ ಎಲ್ಲವೂ ನೆನಪಾಗಿದೆ(ನೆನಪು ಮಾತ್ರ)!!!!