ಮಂಗಳವಾರ, ಜುಲೈ 31, 2018

ಹೆಣದ ವಾಸನೆ ( ಕಥೆ)

ನಾವು ರಾಜಾಜಿನಗರದಲ್ಲಿದ್ದಾಗ ಪಕ್ಕದ ಮನೆಯಲ್ಲಿ ಕೋಲಾರ ಮೂಲದ ಸಂಸಾರವೊಂದು ವಾಸವಾಗಿತ್ತು. ಯಾವುದೊ ಆಸ್ತಿಯ ಸಲುವಾಗಿ ತಂದೆ ಮತ್ತು ಮಗನ ಮಧ್ಯೆ ಆಗಾಗ ಜಗಳಗಳು ನಡೆಯುತ್ತಿರುವುದು ನಮಗೆ ಕಿಟಕಿಯ ಮೂಲಕ ಕೇಳಿಸುತ್ತಿರುತ್ತಿತ್ತು. ಜಾಸ್ತಿ ಜಗಳ ನಡೆದಾಗಲೆಲ್ಲ ಆ 60 ವರ್ಷ ವಯಸ್ಸಿನ ತಂದೆ ಬಸ್ ಹತ್ತಿಕೊಂಡು ಕೊಲಾರಕ್ಕೆ ಹೋಗಿಬಿಡುತ್ತಿದ್ದ. ಅದು ಹೇಗೋ ಏನೋ ಆರೋಗ್ಯವನ್ನು ಹದಗೆಡಿಸಿಕೊಂಡು ಬರುತ್ತಿದ್ದ. ತಿರುಗಿ ಬಂದ ಸ್ವಲ್ಪ ದಿನಗಳಲ್ಲೇ ಆಂಬುಲೆನ್ಸ್ ಬಂದು ಅವನನ್ನು ಹೇರಿಕೊಂಡು ಹೋಗುತ್ತಿತ್ತು. ಮತ್ತೆ 15-20 ದಿನ ಆಸ್ಪತ್ರೆಯಲ್ಲೇ ಕಳೆದು ಸ್ವಲ್ಪ ಗೆಲುವಾಗಿ ಬರುತ್ತಿದ್ದ. ಅವನು ಮನೆಗೆ ಬರುತ್ತಿದ್ದಂತೆಯೇ ಹೆಂಡತಿ ಮತ್ತು ಮಗ ಅವನಿಗೆ ಬಯ್ಯಲು ಪ್ರಾರಂಭಿಸುತ್ತಿದ್ದರು - "ಆಸ್ಪತ್ರೆಯಲ್ಲೇ ಇರಬೇಕಿತ್ತು ಆರಾಮಾಗಿ ನರ್ಸ್ ಜೊತೆಗೆ.... ವರ್ಷಕ್ಕೆ ಮೂರ್ ಸಲ ಆಸ್ಪತ್ರೆ ಸೇರ್ತಿಯ. ಪ್ರತೀ ಸಲಾನೂ ಎರಡೆರಡು ಲಕ್ಷ ನುಂಗಿ ಹಾಕ್ತಿಯ. ಅಸ್ತಿ ಪತ್ರಕ್ಕೆ ಸಹಿ ಹಾಕಾದ್ರೂ ಸಾಯಿ!" ಮತ್ತೆ ಅವರ ಮನೆಯಲ್ಲಿ ಮಾತಿನ ಚಕಮಕಿಗಳು ಬೆಂಕಿಯನ್ನು ಎಬ್ಬಿಸುತ್ತಿದ್ದವು.

ಒಂದು ಶನಿವಾರ ಬೆಳಿಗ್ಗೆ ಆ ಮನೆ ಮಂದಿಯೆಲ್ಲರೂ ಕಾರು ಹತ್ತಿಕೊಂಡು ಎಲ್ಲಿಗೋ ಹೋದರು, ಆ ಮುದುಕನೊಬ್ಬನನ್ನೇ ಮನೆಯಲ್ಲಿ ಬಿಟ್ಟು.
ಮಳೆಗಾಲದ ಥಂಡಿಗೆ ಆ  ವಾರವೆಲ್ಲ ಅವನಿಗಂತೂ ಕೆಮ್ಮು ಜಾಸ್ತಿಯೇ ಇತ್ತು. ನಮ್ಮ ಮನೆಯೊಳಗೇ ಯಾರೋ ಕೆಮ್ಮುತ್ತಿದ್ದಾರೋ ಎನ್ನುವಷ್ಟು ಜೋರಾಗಿ ಕೇಳಿಸುತ್ತಿತ್ತು ಆ ಕೆಮ್ಮು. ಆ ದಿನ ಸಂಜೆ ಅವನು ವಾಕಿಂಗ್ ಹೋಗಿದ್ದನ್ನು ನೋಡಿದೆವು. ತಿರುಗಿ ಬಂದದ್ದನ್ನೂ ನೋಡಿದೆವು. ಹೊರಗೆ ಹೋದ ಹೆಂಡತಿ, ಮಗ, ಸೊಸೆ ಯಾರೂ ರಾತ್ರಿಯಾದರೂ ಬರಲಿಲ್ಲ. ರಾತ್ರಿಯೆಲ್ಲಾ ಅವನ ಕೆಮ್ಮು ನಮ್ಮನ್ನು ಆಗಾಗ ಎಚ್ಚರಿಸುತ್ತಿತ್ತು.

ಭಾನುವಾರ ನಾವು ಪಿಕ್ನಿಕ್ ಗೆ ಹೋಗಿ ಸಂಜೆ ಬರುವಷ್ಟರಲ್ಲಿ ಆ ಮುದುಕನ ಕೆಮ್ಮು ಇರಲಿಲ್ಲ. ವಾಕಿಂಗ್ ಹೋಗಿರಬಹುದು ಎಂದುಕೊಂಡೆವು. ರಾತ್ರಿಯಾದರೂ ಆ ಮನೆಯಲ್ಲಿ ಯಾರ ಸುಳಿವೂ ಇಲ್ಲ. ಅವನಿಗೇನೋ ಆಗಿದೆ ಎಂದೆನ್ನಿಸಿತು. ಪತಿಯಲ್ಲಿ ಹೇಳಿದಾಗ, " ಅವನನ್ನು ಯಾರೂ ಪ್ರೀತಿಯಿಂದ ಕಾಣುತ್ತಿರಲಿಲ್ಲ. ಸಾಯಲೆಂದೇ ಒಂಟಿಯಾಗಿ ಬಿಟ್ಟುಹೋಗಿರಬಹುದು" ಎಂದರು. ಸೋಮವಾರ ಬೆಳಿಗ್ಗೆ ನನ್ನ ಪತಿ ಹೋಗಿ ಅವರ ಮನೆಯ ಬೆಲ್ ನ್ನು ಹಲವು ಬಾರಿ ಬಾರಿಸಿದರೂ ಯಾರೂ ಬಾಗಿಲು ತೆಗೆಯಲಿಲ್ಲ. ಈಗಿನ ಕಾಲದಲ್ಲಿ ಬಾಗಿಲು ಒಳಗಿನಿಂದ ಲೋಕ್ ಆಗಿದೆಯೋ ಅಥವಾ ಹೊರಗಿನಿಂದ ಲೋಕ್ ಆಗಿದೆಯೋ ಗೊತ್ತಾಗುವುದೇ ಇಲ್ಲ. ಕಿಟಕಿಯಿಂದಲೂ ಏನೂ ಕಾಣಿಸಲಿಲ್ಲ. ಅವರ ಮನೆಯ ಫೋನ್ ನಂಬರ್ ನಮ್ಮಲ್ಲಿ ಇರಲಿಲ್ಲ. ಏನು ಮಾಡುವುದೋ ತಿಳಿಯದೆ ಸುಮ್ಮನಾದೆವು. ಆ ಮನೆಗೆ ಮಂಗಳವಾರವೂ ಯಾರೂ ವಾಪಸಾಗಲಿಲ್ಲ. ಅವನೇನಾದರೂ ಸತ್ತಿದ್ದರೆ ಹೆಣದ ವಾಸನೆ ಬರಬೇಕಿತ್ತಲ್ಲ ಇಷ್ಟೊತ್ತಿಗೆ ಎಂಬ ಯೋಚನೆಯೊಂದೂ ಬಂತು.

ಬುಧವಾರ ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ಆ ಮನೆಯ ಮುಂದೆ ಕಾರು ಬಂದು ನಿಂತಿತು. ಆ ಮುದುಕನ ಹೆಂಡತಿ ಕಾರನ್ನು ಇಳಿಯುವುದನ್ನು ನೋಡಿದೆವು. ಹಣೆಯಲ್ಲಿ ಕುಂಕುಮ ಇರಲಿಲ್ಲ; ಕೂದಲನ್ನು ನಾಜೂಕಾಗಿ ಬಾಚಿರಲಿಲ್ಲ. ಮುದುಕ ಸತ್ತು, ಭಾನುವಾರ ನಾವು ಪಿಕ್ನಿಕ್ ಹೋದ ಸಮಯದಲ್ಲಿ ಅವನ ಹೆಣವನ್ನು ಒಯ್ದಿರಬೇಕು ಎಂದುಕೊಂಡೆವು.
ವಿಧವೆ ಹೆಂಗಸಿನ ಬಗ್ಗೆ ಕನಿಕರವೆನಿಸಿತು.

ಆ ಮನೆಯಿಂದ ಮಾತುಗಳು ಕೇಳಿಸಿದವು. ಅವನ ಹೆಂಡತಿ ಹೇಳುತ್ತಿದ್ದಳು- " ಈ ಮನ್ಶ, ಕೆಮ್ಮು ಜೋರ್ ಆಯ್ತು ಹೇಳಿ ಆಸ್ಪತ್ರೆಗೆ ಹೋಗಿ ಅಡ್ಮಿಟ್ ಆಗಿದ್ದಾನೆ. ಹಿಂಗೇ ಪದೇ ಪದೇ ಆಸ್ಪತ್ರೆಗೆ ಖರ್ಚು ಮಾಡಿ, ಅವನ ಆಸ್ತಿಗಿಂತ ಜಾಸ್ತಿನೇ ದುಡ್ಡು ನುಂಗಿ ಹಾಕ್ತಾನೆ. ಈ ಸಲನಾದ್ರೂ ಅವನು ಅಲ್ಲೇ ನೆಗದ್ ಬಿದ್ ಹೋಗಿದ್ರೆ ಸಾಕಾಗಿತ್ತು!"