ಬುಧವಾರ, ಜನವರಿ 29, 2020

ಅಲ್ಲೊಂದು ತೆರೆದ ಕಣ್ಣು ಇದ್ದೇಇರುತ್ತದೆ ನೀನು ನಿದ್ರಿಸುತ್ತಿದ್ದರೂ ಕೂಡ.

ಯಾವುದೋ ಅಶಾಂತಿಯಲ್ಲಿ
ನೀನು ಬೇಕೆನಿಸಿ
ನಿನ್ನ ಕಾಣುವವರೆಗೂ
ಅಳುವನ್ನ ಕಟ್ಟಿ ಹಿಡಿಯುತ್ತೇನೆ.

ಅಳುವಿನ ಕಟ್ಟೆ ಒಡೆಯುವಂತಾದರೆ
ಭಾರದ ಹೆಜ್ಜೆಗಳಲ್ಲಿ
ಕಡಲನ್ನು ಸುತ್ತು ಹೊಡೆಯುತ್ತ
ಹಿಮ್ಮಡಿ ಸವೆಸಿಕೊಂಡು
ನಿನ್ನ ಎತ್ತರವನ್ನು ಕಂಡು
ಕಣ್ಣು ಮಿಟುಕಿಸಿ ಹಾದುಹೋಗುತ್ತೇನೆ.

ಬೆಳಕಿಲ್ಲದ ಮಬ್ಬು ದಿನಗಳಲ್ಲಿ
ಹೂವುಗಳು ಬಿರಿಯಲಾಗದೇ
ಕೊರಗುವಾಗ
ನೀನಿರುವ ಮರಳ ಬೇಲೆ ಮಸುಕಾಗಿ
ನಾ ಓಡಿ ಬಂದು
ನಿನ್ನ ನೋಡಲು ನುಗ್ಗುತ್ತೇನೆ
ಅಲ್ಲೊಂದು ತೆರೆದ ಕಣ್ಣು ಇದ್ದೇಇರುತ್ತದೆ
ನೀನು ನಿದ್ರಿಸುತ್ತಿದ್ದರೂ ಕೂಡ.

ಅಳದೇ ಅಶಾಂತಿ ಕಳೆಯುವುದಿಲ್ಲ
ನಿನ್ನ ಕಾಣದೇ ಅಳಲಿಕ್ಕಾಗುವುದಿಲ್ಲ.


ಸೋಮವಾರ, ಜನವರಿ 20, 2020



ನನ್ನ ದ್ವಂದ್ವಗಳು ಮುನಿಸಿಕೊಂಡಿವೆ.

ಕಾಮವೋ ಪ್ರೇಮವೋ ತಿಳಿಯದ
ತೊಳಲಾಟಗಳು
ನಿನ್ನನ್ನೊಂದು ಧ್ಯಾನವೆಂಬಂತೆ
ಕಂಡುಕೊಂಡ ಮೇಲೆ
ನನ್ನ ದ್ವಂದ್ವಗಳು ಮುನಿಸಿಕೊಂಡಿವೆ.

ಹತ್ತಿರ ಬರುವುದೋ ಬಿಡುವುದೋ ಎಂಬ
ಅಜ್ಞಾತ ಬುದ್ಧಿಯ ಮೇಲೇ ಅನುರಾಗ
ಹುಟ್ಟಿದಾಗ
ನನ್ನ ದ್ವಂದ್ವಗಳು ಮುನಿಸಿಕೊಂಡಿವೆ.

ನಿನ್ನೆ ಕಂಡವನು
ಈಗ ಕಾಣುತ್ತಿರುವವನು
ನೀನೇ ಹೌದು ಎಂದು ಗೊತ್ತಾದಮೇಲೆ
ನನ್ನ ದಂದ್ವಗಳು ಮುನಿಸಿಕೊಂಡಿವೆ.

ನೀನು ಪದೇಪದೇ ಕಾಣಿಸಿಕೊಂಡಾಗ
ನೋಡುವುದೋ ಬಿಡುವುದೋ ಎನ್ನುವ
ಸಂಕಟವನ್ನು ಬದಿಗಿಟ್ಟು
ಕಣ್ಣರಳಿಸಿ ಖುಷಿಪಡುವ ನನ್ನಲ್ಲಿ
ದ್ವಂದ್ವಗಳು ಸತ್ತುಹೋಗಿವೆ.