ಬುಧವಾರ, ಜನವರಿ 29, 2020

ಅಲ್ಲೊಂದು ತೆರೆದ ಕಣ್ಣು ಇದ್ದೇಇರುತ್ತದೆ ನೀನು ನಿದ್ರಿಸುತ್ತಿದ್ದರೂ ಕೂಡ.

ಯಾವುದೋ ಅಶಾಂತಿಯಲ್ಲಿ
ನೀನು ಬೇಕೆನಿಸಿ
ನಿನ್ನ ಕಾಣುವವರೆಗೂ
ಅಳುವನ್ನ ಕಟ್ಟಿ ಹಿಡಿಯುತ್ತೇನೆ.

ಅಳುವಿನ ಕಟ್ಟೆ ಒಡೆಯುವಂತಾದರೆ
ಭಾರದ ಹೆಜ್ಜೆಗಳಲ್ಲಿ
ಕಡಲನ್ನು ಸುತ್ತು ಹೊಡೆಯುತ್ತ
ಹಿಮ್ಮಡಿ ಸವೆಸಿಕೊಂಡು
ನಿನ್ನ ಎತ್ತರವನ್ನು ಕಂಡು
ಕಣ್ಣು ಮಿಟುಕಿಸಿ ಹಾದುಹೋಗುತ್ತೇನೆ.

ಬೆಳಕಿಲ್ಲದ ಮಬ್ಬು ದಿನಗಳಲ್ಲಿ
ಹೂವುಗಳು ಬಿರಿಯಲಾಗದೇ
ಕೊರಗುವಾಗ
ನೀನಿರುವ ಮರಳ ಬೇಲೆ ಮಸುಕಾಗಿ
ನಾ ಓಡಿ ಬಂದು
ನಿನ್ನ ನೋಡಲು ನುಗ್ಗುತ್ತೇನೆ
ಅಲ್ಲೊಂದು ತೆರೆದ ಕಣ್ಣು ಇದ್ದೇಇರುತ್ತದೆ
ನೀನು ನಿದ್ರಿಸುತ್ತಿದ್ದರೂ ಕೂಡ.

ಅಳದೇ ಅಶಾಂತಿ ಕಳೆಯುವುದಿಲ್ಲ
ನಿನ್ನ ಕಾಣದೇ ಅಳಲಿಕ್ಕಾಗುವುದಿಲ್ಲ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ