ಶನಿವಾರ, ನವೆಂಬರ್ 26, 2011

ನೀನೆಲ್ಲೆಲ್ಲೆಲ್ಲೂ ಇರುವುದಿಲ್ಲ..........


ನಾನಿಲ್ಲಿ ನಿನಗಾಗೇ ಕಾಯುತಿರುವೆ.
ನೀನಿಲ್ಲವೆಂದು ನೋಯುತಿರುವೆ........

ಪೂರ್ವದಲ್ಲೇಳುವ ಸೂರ್ಯನು
ನಿನ್ನ ಕಣ್ಬೆಳಕು ಹೊತ್ತು ತರುತ್ತಾನೆ;

ಕೆರೆಯ ಹತ್ತಿರಾದಾಗಲ್ಲೆಲ್ಲ
ನಿನ್ನ ದನಿಯೇ ಕೇಳಿದಂತಾಗುತ್ತದೆ;

ಕಛೇರಿಯ ಕೆಲಸದ ನಡುವೆ
ನೀನಿದ್ದ ಕಡೆಗೆ ಕಣ್ಣು ಹಾಯಿಸುವುದೋ,
ನೀನಿದ್ದ ಕಡೆಗೆ ಹಾದುಹೋಗುವುದೋ
ನನ್ನನ್ನು ಉಲ್ಲಸಿತಳನ್ನಾಗಿಸುತ್ತದೆ.

ರಾತ್ರಿಪಾಳಿಯಲ್ಲಿ ನಾನು ನಿನ್ನ ದೇಶದಲ್ಲಿದ್ದೇನೆಂದು ಭಾವಿಸುತ್ತೇನೆ!
ನನ್ನದು ಬರೀ ಭ್ರಮೆ!!!!!

ನೀನೆಲ್ಲೆಲ್ಲೆಲ್ಲೂ ಇರುವುದಿಲ್ಲ..........

ನಾನಿಲ್ಲಿ ಒಂಟಿಯಾಗಿ,,,,,,,,,,,, ಒಂಟಿಯಾಗಿದ್ದೇನೆ.....................
ನಿನ್ನ ಬಗೆಗೆ ಯೋಚಿಸುವುದೊಂದೇ
ನನ್ನ ಒಂಟಿತನಕ್ಕೆ ಪರಿಹಾರವೆನ್ನಿಸುತ್ತದೆ!

ಹಟಹಿಡಿದ ಭಾವಗಳು ಒಳಗೊಳಗೇ ಒದರಿವೆ!!

ಶರತ್ಕಾಲದ ಬಾನಿನಂತಾಗಿದೆ ಮನಸ್ಸು...........
ಗೋಜಲು ಗೋಜಲಾಗಿ
ಹೆಣೆದುಕೊಂಡ ಮೋಡಗಳು,
ದಿಕ್ಕೆಟ್ಟು ಚದುರಿದ ಮುಗಿಲು,
ಬಾನಂಚಿನಲ್ಲಿ ಗಾಢವರ್ಣ ಬಿಂಬಿಸಿವೆ!!!!

ಬಳಿಬರುವ ಸಂಕೀರ್ಣ ಸಂಬಂಧಗಳು
ಆಳಕ್ಕುರುಳುವ ಸೂಚನೆಯಿತ್ತು,
ಒಳಗೇ ಉರಿಹೊತ್ತಿಸಿವೆ.

ಜಟಿಲತೆ ಮನಃಪಟಲಕ್ಕೆ ಪರೆದೆ ಎಳೆದು
ಕಪಟವಾಡಿದೆ!!

ನಿಶೆಯ ಸೋಂಕು ಹರಡಿ
ಭಾವವೆಲ್ಲ ಕದಡಿಹೋಗಿದೆ!!!

ಹೊಗೆಯಂತೆ ಗೋಚರಿಸುವ ಮುಗಿಲು
ಹಗಲು ರಾತ್ರಿಯೆನ್ನದೆ ಬಾನೆಲ್ಲ ಚದುರಿದೆ!

ಹಟಹಿಡಿದ ಭಾವಗಳು
ಒಳಗೊಳಗೇ ಒದರಿವೆ!!

ಶನಿವಾರ, ಆಗಸ್ಟ್ 13, 2011

ನೀ ಹೇಳಿದ್ದು

ನಗುವೆಯಲ್ಲೆ ಹುಡುಗಿ,
ಸೃಷ್ಟಿ ಶೃಂಗಾರದ ಸೊಬಗಂತೆ,
ಒನಪು ಒಯ್ಯಾರದ ಬೆಡಗಂತೆ,
ಸಪ್ತಸ್ವರದ ಹೊನಲ ಹಾಡಂತೆ.

ನಗುವೆಯಲ್ಲೇ ಹುಡುಗಿ,
ಚೈತ್ರ ಚಿತ್ತಾರ ಬರೆದಂತೆ,
ಬೆಳದಿಂಗಳ ಉತ್ಸವದಂತೆ,
ಚುಕ್ಕಿ ನಗುವಂತೆ.

ನಗುವೆಯಲ್ಲೇ ಹುಡುಗಿ,
ಗಗನ ಹರ್ಷ ಸುರಿಸಿದಂತೆ,
ಹಸಿರ ಚಿಗುರು ಬಿರಿಯುವಂತೆ,
ಮಲೆನಾಡು ಮೈದುಂಬಿ ನಕ್ಕಂತೆ.

ನಗುವೆಯಲ್ಲೇ ಹುಡುಗಿ,
ತೊದಲ್ನುಡಿಯ ಜೇನಂತೆ,
ಅಂಬೆಗಾಲ ಅರಗಿಣಿಯಂತೆ,
ಪುತ್ತ ಮಗು ಚಪ್ಪಳೆತಟ್ಟಿದಂತೆ.

ನಗುವೆಯಲ್ಲೇ ಹುಡುಗಿ,
ನಗೆಯಲ್ಲೇ ಮಿಂದವಳಂತೆ,
ನಗೆಯಲ್ಲೇ ಬೆಳೆದವಳಂತೆ,
ನಗೆಯಲ್ಲೇ ಹುಟ್ಟಿದವಳಂತೆ.

ನಗು ಹುಡುಗಿ ನಗು,
ಹುಚ್ಚುಕವಿಯ, ಬಿಚ್ಚು ನುಡಿಯ
ಕೇಳುತ್ತಲೇ ನಗು;

ಹುಸಿ ಮುನಿಸಿರಲಿ,
ನಸು ಕೋಪವಿರಲಿ,
ತುಂಬು ಚೆಲುವಿರಲಿ,
ಚೆಲುವಲ್ಲರಳುವ ಒಲವಿರಲಿ.




ಭಾನುವಾರ, ಜುಲೈ 17, 2011

ಧ್ರುವಗಳಂತೆ

ನಾನು ಹೊರಟಾಗ-
ನಿನಗೆ ಹೊರಡುವ ಮನಸಿರಲಿಲ್ಲ.
ನನಗೆ ಹರಟುವ ಮನಸಿರಲಿಲ್ಲ.

ರೂಢಿ

ಕವನ ಬರೆಯುವುದು ನನ್ನ ರೂಢಿ
ನೋವು ಮರೆಸುವುದು ಅದರ ರೂಡಿ.

ಹುಷಾರು!

ನಂಬಿಸಿ ಮೋಸಮಾಡದಿರು.
ಚುಂಬಿಸಿ ಮೋಸಹೋಗದಿರು

ತಡವಾಗಿ ಬಂದ ಹುಡುಗನಿಗೆ

ನಿಮಿಷ ನಿಲ್ಲಲಿಲ್ಲ ನನ್ನ ಸಲುವಾಗಿ;
ನಾನೂ ನಿಲ್ಲಲಿಲ್ಲ ನಿನ್ನ ಸಲುವಾಗಿ.

ಆಗದ್ದು

ಕನ್ನಡಿ ಒಡೆದರೆ ಮತ್ತೆ ಕೂಡಿಸಲಾಗದು.
ಒಡೆದ ಹೃದಯವ ಮತ್ತೆ ಜೋಡಿಸಲಾಗದು.

ನನ್ನುಸಿರು

ನೀನಿಲ್ಲದೆ ಜೀವಿಸಬಲ್ಲೆ.
ಆದರೆ ನಿನ್ನ ನೆನಪಿಲ್ಲದೆ ನನ್ನ ಉಸಿರಿಲ್ಲ!

ಮಂಗಳವಾರ, ಜುಲೈ 12, 2011

ಕಿಟಕಿ ತೆರೆದಾಗ.......(ಕಥೆಯಂತಾ ಕಥೆ)

ನಮ್ಮದು ಮಲೆನಾಡಿನ ಹಳೆಯಕಾಲದ ಮನೆ. ಮೇಲಿನ ಬಾಲ್ಕನಿಯೊಂದನ್ನು ಹೊರತುಪಡಿಸಿದರೆ, ಮನೆಗೆ ಹೊದೆಸಿದ ಹೆಂಚುಗಳು ಮಾತ್ರ ಬಿಸಿಲನ್ನು ಕಾಣುತ್ತವೆ. ಮನೆಯ ಹೊರಗೋಡೆಗಳಿಗೆ ಒಟ್ಟೂ ಮೂರು  ಮತ್ತು ಒಳಗೋಡೆಗಳಿಗೆ ಆರು ಕಿಟಕಿಗಳಿವೆ. ಬೆಳಕಿಗೆ ಬರಗಾಲ. ಬಾಲ್ಕನಿಯಲ್ಲಿ ಕೂತರೆ ಸುತ್ತೆಲ್ಲ ಮರಗಳು, ಮನೆಯ ಹಿಂದುಗಡೆಯೋ ದೊಡ್ಡ ಗುಡ್ಡ. ಹೀಗಾಗಿ ಬಹುತೇಕ ವರ್ಷದ ಎಲ್ಲಾ ಕಾಲಗಳಲ್ಲೂ ಸಂಜೆ ಐದು ಘಂಟೆಗೇ ರಾತ್ರಿಯಾದಂತೆನ್ನಿಸಿಬಿಡುತ್ತದೆ.

ಒಳಗೋಡೆಯ ಕಿಟಕಿಗಳು ಯಾವತ್ತೂ ಮುಚ್ಚಿರುತ್ತವೆ. ಅವುಗಳನ್ನು ಇರಿಸುವ ಆವಶ್ಯಕತೆಯೇನಿತ್ತೋ ಗೊತ್ತಿಲ್ಲ. ಯಾವಾಗಲಾದರೊಮ್ಮೆ ಅದರ  ಬಗ್ಗೆ ಅಜ್ಜಿಯಲ್ಲಿ ಪ್ರಶ್ನೆಯಿಟ್ಟಾಗ ಅಜ್ಜಿ ಹೇಳುತ್ತಾಳೆ-" ಇದು ನಿನ್ನ ಅಜ್ಜನ ಅಜ್ಜ ಕಟ್ಟಿಸಿದ ಮನೆ, ಆವತ್ತಿನ ಕಾಲಕ್ಕೆ ಹೇಗಿರಬೇಕಿತ್ತೋ ಹಾಗಿದೆ. ಈಗ ನಾವು ಇಷ್ಟವಿರಲಿ ಇಲ್ಲದಿರಲಿ ಹೊಂದಿಕೊಂಡು ಹೋಗಬೇಕು". ಅಜ್ಜಿ ಹೇಳಿ ಮುಗಿಸುವುದನ್ನೇ ಕಾದಿರುವವಳಂತೆ ನಾನು ಮತ್ತೆ ಪ್ರಶ್ನೆಯೆತ್ತುತ್ತೇನೆ-" ಅಲ್ಲಾ ಅಜ್ಜಿ, ಇದು ಇಷ್ಟ- ಕಷ್ಟದ ಪ್ರಶ್ನೆಯಲ್ಲ. ಈಗೇನೋ ಮನೆಯಲ್ಲಿ ಬೆಳಕಿಗೆ ವಿದ್ಯುತ್ ದೀಪವಿದೆ; ಅಜ್ಜನ ಅಜ್ಜ ಮನೆ ಕಟ್ಟಿಸುವ ಕಾಲಕ್ಕೆಲ್ಲ ಎಣ್ಣೆದೀಪ! ಮನೆಯೊಳಗೆಲ್ಲ ಕತ್ತಲೆಯೇ ತುಂಬಿರುವುದೆಂದು ಗೊತ್ತಿದ್ದೂ, ಸರಿಯಾದ ಕಿಟಕಿ ಮಾಡಿಸಲಿಲ್ಲವಲ್ಲಜ್ಜಿ!? ತೆರೆದ ಜಗುಲಿ ಮತ್ತು ಅಡ್ಡ ಓರಿ ಬಿಟ್ಟರೆ ಮತ್ತೆಲ್ಲಿ ಹಗಲುಬೆಳಕು ಕಾಣುತ್ತೀ ನೀನು ಇಷ್ಟು ದೊಡ್ಡ ಮನೆಯೊಳಗೆ?"

ಆಜ್ಜಿಯ ಮುಖ ಕುಂದುತ್ತದೆ, " ಮಗಳೇ, ನಿನ್ನ ಪ್ರಶ್ನೆಗೆ ನನ್ನಲ್ಲಿ ಉತ್ತರವಿಲ್ಲ; ನಮ್ಮ ಕಾಲದವರ್ಯಾರೂ ನಿನ್ನಂತೆ/ನಿಮ್ಮಂತೆ ಯೋಚಿಸಿಲ್ಲ. ಮದುವೆಗೂ ಮೊದಲು ಮನೆಕೆಲಸ ಕಲಿಯುವ ಜವಾಬ್ಧಾರಿ, ಮದುವೆಯಾದಮೇಲೆ ಮಕ್ಕಳ ಜವಾಬ್ಧಾರಿ, ಮುಗಿಯಿತು ಇಷ್ಟೇ..... ನಮ್ಮ ಜೀವನದ ಉದ್ಧೇಶ ಬಹಳ ಸರಳವಾದ್ದು- "ಮನೆಮಂದಿಯೆಲ್ಲ ನೆಮ್ಮದಿಯಿಂದಿರಬೇಕು". ನಾವ್ಯಾರೂ ನಮ್ಮ ಸಂತಸದ ಬಗ್ಗೆ ಯಾವತ್ತೂ ಯೋಚಿಸಿಲ್ಲ. ನಿನ್ನಂತೆ ನಾವ್ಯಾರೂ ಹಬ್ಬಕ್ಕೆಲ್ಲ ಹೊಸ ಬಟ್ಟೆ ಬೇಕೆಂದಾಗಲಿ, ವರ್ಷಕ್ಕೆ ನಾಲ್ಕುಜೊತೆ ಚಪ್ಪಲಿ ಬೇಕೆಂದಾಗಲಿ ಹಟ ಹಿಡಿದಿರಲಿಲ್ಲ. ನಮ್ಮ ಕಾಲದಲ್ಲೆಲ್ಲ ವರ್ಷಕ್ಕೆ ನಾಲ್ಕು ಸೀರೆ ಸಿಕ್ಕರೆ ಮುಗಿಯಿತು, ಅದರಲ್ಲೇ ನಿತ್ಯ ಉಡುಗೆಗೂ, ನೆಂಟರ ಮನೆಗೂ ನಿಭಾಯಿಸಬೇಕು. ಆದರೆ ಇದ್ಯಾವುದೂ ನಮಗೆ ಬೇಜಾರಿನ ವಿಷಯಗಳಾಗಿರಲಿಲ್ಲ. ವರ್ಷಕ್ಕೆರಡು ತೊಲೆ ಬಂಗಾರ ನಮ್ಮ ಪೆಟ್ಟಿಗೆ ಸೇರುತ್ತಿದ್ದುದು ಮಾತ್ರ ಸದಾ ನೆಮ್ಮದಿ ತರುವ ವಿಷಯವಾಗಿತ್ತು.

ಇಷ್ಟು ಬಿಟ್ಟರೆ ದೇವರು. ದೇವರಿಗೆ ನೀನೇನು ನೋಡಿಲ್ಲ ಹೇಗೆ ನಂಬುತ್ತೀಯಜ್ಜಿ ಅಂದು ನೀ ಕೇಳುತ್ತೇಯೆ. ನೀನಾದರೋ ಶಾಲಾ ಪ್ರವಾಸವೆಂದು ನಾಲ್ಕಾರು ಊರು ಸುತ್ತಿದವಳು, ಶಿಭಿರಗಳೆಂದು ಹಲವಾರು ಕಡೆ ಹಲವು ವಿಷಯ ತಿಳಿದವಳು, ನಿನಗೆ ಬೇಕಾದ್ದೆಲ್ಲ ಓದಬಲ್ಲೆ. ಹೀಗಿರುವಾಗ, ನಿನ್ನ ಬುದ್ಧಿ ಬೆಳೆದಿದೆ, ನಿನ್ನೊಳಗೆ ನೀ ವಿಚಾರಮಾಡುತ್ತೀಯೆ. ನಾವಾದರೋ, ಯಾವುದನ್ನಾದರೂ ಇದೆಯೋ,ಇಲ್ಲವೋ ಎಂಬ ಪರಾಮರ್ಷೆಗೆ ಹೋಗುವುದಿಲ್ಲ.ನಾನು ದೇವರನ್ನು ನಂಬುತ್ತೇನೆ, ಈ ನಂಬಿಕೆಯಿಂದ ನನ್ನ ಜವಾಬ್ಧಾರಿ ಕಡಿಮೆಯದಂತೆನ್ನಿಸುತ್ತದೆ.
ನಾವೆಲ್ಲ ನೆಮ್ಮದಿಯಿಂದಿರಬೇಕೆಂದುಕೊಂಡು ಬದುಕಿದವರು, ಜೀವನದಲ್ಲಿ ನಮಗಿನ್ನೇನೂ ಉದ್ಧೇಶವಿರಲಿಲ್ಲ".  ನಾನು ಕೇಳುವುದೊಂದು ಈ ಅಜ್ಜಿ ಹೇಳುವುದೊಂದು!!

ಒಮ್ಮೊಮ್ಮೆ ಯೋಚಿಸುತ್ತಿರುತ್ತೇನೆ- ನಮಗೆಲ್ಲ ನೆಮ್ಮದಿಯ ಬಗೆಗೆ ಯೋಚಿಸುವಷ್ಟು ಸಮಯವಾದರೂ ಎಲ್ಲಿದೆ? ನಾವೆಲ್ಲ ನಮ್ಮ ಉದ್ಧೇಶದ ಈಡೇರಿಕೆಯಲ್ಲೇ ಮುಳುಗಿಬಿಟ್ಟಿದ್ದೇವೆ. ಮಾಧ್ಯಮಗಳ ಮೂಲಕವಾಗಿ ನಮಗೆ ಸಾಧಕರ ಸಂಪರ್ಕ ಜಾಸ್ತಿಯಾಗಿದೆ( ಏಕಮುಖ ಸಂಪರ್ಕವಾಗಿದ್ದರೂ ಸಹ). ನಾನೂ ಏನನ್ನಾದರೂ ಸಾಧಿಸಿ ಪ್ರಸಿದ್ಧಿಗಳಿಸಬೇಕೆಂಬ ಛಲಹೊತ್ತು ನಡೆಯುತ್ತಿದ್ದೇವೆ. ನಾವು ನಮಗಾಗಿಯಲ್ಲ, ಸಮಾಜದಲ್ಲಿ ನಮ್ಮ ಸ್ಥಾನ ಹೆಚ್ಚಿಸಲಾಗಿ ಹೋರಾಡ ಹೊರಟಿದ್ದೇವೆ; ಇಲ್ಲಾ, ಹಣದ ಬೆನ್ನುಹತ್ತಿದ್ದೇವೆ. ಗುರಿತಲುಪಿದಾಗ ಮಾತ್ರ ನೆಮ್ಮದಿ ಸಿಕ್ಕೀತೆಂಬ ಭ್ರಮೆಯಲ್ಲಿದ್ದೇವೆ. ಸಾಧನೆ ಎಂಬುದು ಕೊನೆಯಿಲ್ಲದ್ದು, ಈ ಗುರಿ ತಲುಪಿಯಾದಮೇಲೆ ಇನ್ನೊಂದು ಗುರಿಗಾಗಿ ಮುನ್ನಡೆದುಬಿಡುತ್ತೇವೆ ಎಂಬ ಪರಿವೆಯೂ ಇಲ್ಲದೇ ನೆಮ್ಮದಿಯ ಯೋಚನೆಯನ್ನೇ ಕೈಬಿಟ್ಟಿದ್ದೇವೆ. ಒಟ್ಟಿನಲ್ಲಿ ನೆಮ್ಮದಿಯ ಆವಶ್ಯಕತೆ ನಮಗಿಲ್ಲವಾಗಿದೆ.

ಮೊನ್ನೆ ಊರಿಗೆ ಹೋದಾಗ, ಮಧ್ಯಾಹ್ನ ಊಟಮಾಡಿ ಎಲ್ಲರೂ ಮಲಗಿದ್ದರು. ನಾನು ಬಾಲ್ಕನಿಯಲ್ಲಿ ಓದುತ್ತಾ ಕುಳಿತಿದ್ದೆ. ಅಜ್ಜಿ ಅಂಗಳದಲ್ಲಿ ನಿಂತು ನನ್ನನ್ನು ಕರೆದಳು, ತನ್ನ ಕೋಣೆಗೆ ಕರೆದೊಯ್ದಳು. ಒಳಗೆ ಹೋಗುತ್ತಿದ್ದಂತೆ ವಿದ್ಯುತ್ ನಿಂತಿತು. ಪಕ್ಕದ ದೇವರ ಕೋಣೆಗೆ ಹೋಗಿ ಅಜ್ಜಿ ಮೊಂಬತ್ತಿ ದೀಪತಂದು, ಮೇಲೆ ತೂಗು ಹಾಕಿದ್ದ ಲಾಟೀನಿನಿಂದ ಕೋಣೆಯೆಲ್ಲ ಬೆಳಕಾಗಿಸಿದಳು. ಟ್ರಂಕಿನಿಂದ ಯಾವುದೋ ಕೀಲಿಕೈ ತೆಗೆದ ಅಜ್ಜಿ ಕಿಟಕಿಯ ಕಡೆಗೆ ಧಾವಿಸಿ ಕೀಲಿಯಿಂದ ಕಿಟಕಿಯನ್ನು ತೆರೆಯ ಹೊರಟಳು. ನನಗೇನೂ ಅರ್ಥವಾಗಲಿಲ್ಲ!

ಕಿಟಕಿ ತೆರೆದಾಗ ಅತ್ತಕಡೆ ದೇವರ ಕೊಣೆಯ ಕಡೆಯಿಂದ ಕಿಟಕಿ ಬಾಗಿಲು ಮುಚ್ಚಿರುವುದು ಗೊತ್ತಾಯಿತು. ಆದರೆ, ಆಕೆ ಕಿಟಕಿ ಚೌಕಟ್ಟನ್ನು ಕೆಳಕ್ಕೆ ತಳ್ಳಿದಾಗ ಏನಾಯಿತೆಂದು ಗೊತ್ತಾಗಲಿಲ್ಲ! ಬಂಗಾರದ ಗಣಿ!! ಚೌಕಟ್ಟಿನ ಮೇಲೆ ಅಂದರೆ, ಗೋಡೆಯೊಳಗೆ ಇರುವಂತೆ ಒಂದು ಪೆಟ್ಟಿಗೆ. ನನಗಾಗ ಗೊತ್ತಾಯಿತು ಅದು ಕಿಟಕಿಯೂ ಹೌದು ಜೊತೆಗೆ, ಬೆಲೆಬಾಳುವ ವಸ್ತುಗಳನ್ನಿದುವ ಖಜಾನೆಯೂ ಹೌದು. ನಾನು ಇದನ್ನು ಹೇಳಿ ಕಳ್ಳರಿಗೇನೂ ಆಹ್ವಾನ ಕೊಡುತ್ತಿಲ್ಲ. ಕಿಟಕಿಯ ಚೌಕಟ್ಟುಗಳು ಗೆದ್ದಲು ಹಿಡಿದು ಹಾಳಾಗುತ್ತಿವೆ, ಇನ್ನು  ಅಲ್ಲಿ ಆಭರಣಗಳನ್ನು ಇಡಲು  ಸಾಧ್ಯವಿಲ್ಲವೆಂದು ಅಜ್ಜಿ ಮತ್ತು ಅಪ್ಪ ನಿರ್ಧರಿಸಿ, ಅವನ್ನೆಲ್ಲ ಬ್ಯಾಂಕ್ ಲಾಕರ್ ಗೆ ಒಯ್ಯಲು ತಯಾರಾಗಿದ್ದರು. ಒಯ್ಯುವ ಮೊದಲು ನನಗೊಮ್ಮೆ ಕಿಟಕಿಯ ಗುಟ್ಟು ತಿಳಿಸುವ ಸಲುವಾಗಿ ಅಜ್ಜಿ ಕಿಟಕಿ ತೆರೆದಿದ್ದಳು!!!!

ಅಜ್ಜಿಗಂತೂ ಈಗ ನೆಮ್ಮದಿಯೇ ಇಲ್ಲವಾಗಿದೆ; ಬ್ಯಾಂಕ್ ಮುಳುಗಿಹೋದೀತೆಂಬ ಭಯ! ಇತ್ತಕಡೆ, ನಾನೂ ನೆಮ್ಮದಿಯ ಬಗೆಗೆ ಯೋಚಿಸಿದಾಗಲೆಲ್ಲ ನೆಮ್ಮದಿಕಳೆದುಕೊಂಡಂತೆ ಆಡುತ್ತೇನೆ; ನನಗೂ ಅಷ್ಟೇ, ನಾನಂದುಕೊಂಡದ್ದನ್ನು ಸಾಧಿಸಲಾಗದಿದ್ದರೆ ಎಂಬ ಭಯ!!!!

ಬುಧವಾರ, ಜುಲೈ 6, 2011

Still Holds Good.............

In your own words-
"I do not think I can suggest a solution to you........in the little time I have known you, I understand that you would be better off finding solution that works for you......and when you have made a choice in your life do not regret it and do not make a choice that you will regret later.


And life is about love - having people you love around you and loving people just makes your life more easier. I am not saying that the love is the only thing in life.


And why do you care what others think? Do you live for others or for yourself?!
I would say it is not a good idea to discover your innerself when you are down with fever! also I dont believe in making others happy and being sad for rest of the life. It is my life for God's sake and no one knows what is best for me better than myself!


And if you are still reading these messages stop reading and get some sleep.......You still owe me the STORY you promised!"

Our GOD's sake..........;)

ಭಾನುವಾರ, ಜುಲೈ 3, 2011

೦೮-೦೩-೨೦೧೧

ನೀ ನಿನ್ನೆ ನನ್ನ ಮರೆಯಲಿಲ್ಲ,
ನನ್ನ ಮರೆಯ ಹೊರಟಿರುವೆ;
ಅಥವಾ,
ನಾ ನಿನ್ನ ಮರೆಯಲೆಂದು
ದೂರ ಹೊರಟಿರುವೆ.....:(

ನಿನ್ನೆಯವರೆಗೂ
ನನ್ನ ಹೃದಯದೊಳಗೇ ಕುಳಿತು
ಹರಟಿರುವೆ!!!

ನಾವಿಬ್ಬರೂ ಒಂದೇ ನೆಲದ ಮೇಲೆ ಮಲಗಿದ್ದೇವೆ;
ನಾನು ನಕ್ಷತ್ರಗಳನ್ನೂ
ನೀನು ಸೂರ್ಯನನ್ನೂ ಕಾಣುತ್ತಿರುವೆಯಷ್ಟೇ....

ನಮ್ಮ ನಡುವೆ ಸಂಪರ್ಕಸಾಧನಗಳಿವೆ-
ನಮಗೆ ನಾವೇ ಸಾಕಾಗಿರುತ್ತೇವೆ,
ಇನ್ನೊಬ್ಬರ ನೆನಪಾಗುವುದಿಲ್ಲ.

೧೮-೦೩-೨೦೧೧

ಎಲ್ಲೋ ಕಳೆದು ಹೋಗಿದೆ!!!!

ಬೇಲಿ ಮುರಿದು ಕರು ನುಗ್ಗಿಬಂದು
ಬೆಳೆದ ಹುಲ್ಲು ಮುಗಿದುಹೋಗಿದೆ;
ಹಸಿರ ಛಾಯೆ ಮಾತ್ರ
ಮತ್ತೆ ಚಿಗುರಲು ಜಿಗಿದಿದೆ.

ಈ ಸಾರಿ,
ಸುತ್ತ ಮುಳ್ಳಿನ ಬೇಲಿ ಎದ್ದಿದೆ,
ಕರು ಬಂದರೆ ಮೈ ಪರಚಿ ಹೋದೀತು!

ಆದರೂ, ಈ ಹುಲ್ಲು ಎತ್ತರೆತ್ತರ ಬೆಳೆದು
ಕರುವನ್ನು ಕರೆಯುತ್ತದೆ.
ಈ ಬೇಲಿಯೋ, ತಡೆಯುತ್ತದೆ!!!!!!

೦೭-೦೨-೨೦೧೧

ಕಾಣದ ಕತ್ತಲಲಿ
ನಾ ನಕ್ಷತ್ರವಾಗಿ
ಬೆಳಕು ಸುರಿಯಬೇಕೆಂದಿದ್ದೆ,
ನೀನು ರಾತ್ರಿಯಲ್ಲಿ ಕಾಣಲಿಲ್ಲ,
ನಾನೂ ಬೆಳಕು ಸುರಿಯಲಿಲ್ಲ......

ಕತ್ತಲೊಳಗೆ ಬೆಳಕೂ ಕರಗಿಹೋಗುವುದಂತೆ;
ನಾನು ಕತ್ತಲಾಗಿ ನಿನ್ನ ಆವರಿಸಬೇಕೆಂದಿದ್ದೆ
ಆದರೆ,
ನೀನೇ ಕತ್ತಲಾಗಿ ಎಲ್ಲಿ ಅಡಗಿರುವೆಯೋ.....

ಕತ್ತಲೆ ಬೆಳಕಾಗಿಯೂ
ಬೆಳಕು ಕತ್ತಲಾಗಿಯೂ ತಿರುಗುವ
ಬಣ್ಣದ ಬಾನಂಚಿನಲ್ಲಿ
ನೀ ಸಿಗುತ್ತಿದ್ದೆ ದಿನವೂ.........

ನಾನು ನೀನಾಗಿಯೂ
ನೀನು ನಾನಾಗಿಯೂ
ಬದಲಾಗಬಹುದಾದಷ್ಟು ಹರಟಿದ್ದೂ ಆಯ್ತು..........

ಹಗಲು ರಾತ್ರಿಯಾಗಿ
ರಾತ್ರಿ ಹಗಲಾಗಿ ಬದಲಾಗುತ್ತಿದೆ,
ನಾವೂ ಬದಲಾಗುತ್ತಿದ್ದೇವೆ
ಭಾವನೆಗಳ ಮನದೊಳಗೇ ಅದುಮಿ.

೩೦-೦೧-೨೦೧೧

ನಾನೂ ಒ೦ಟಿಯಾಗಿರುತ್ತೇನೆ
ನೂರಾರು ಒಂಟಿ ಜೀವಗಳ ನಡುವೆ!
ನನ್ನಾತ್ಮ ನಿರತವಾಗಿರುತ್ತದೆ
ನೆಮ್ಮದಿಯ ಹಾದಿಯತ್ತ.

ನನ್ನ ಉಕ್ಕಿ ಬರುವ ನಗು ಬಚ್ಚಿಟ್ಟುಕೊಂಡಿದೆ;
ಈ ಆತ್ಮಕ್ಕಾದರೋ
ನೆಮ್ಮದಿ ಕಾಣುವ ಹಂಬಲ,
"ಹಿಗ್ಗಿ ನಗುವುದೇ ಸುಗ್ಗಿ" ಎಂಬುದನ್ನು ಅದು ಮರೆತಂತಿದೆ!!!

ಹರಿವ ಕಣ್ಣೀರಿಗೆ ಒಡ್ಡು ಬೇರೆ!
ಬಿಕ್ಕಲು ಬಿಡುವುದಿಲ್ಲ ಈ ಆತ್ಮ-
ಅದಕ್ಕೆ ಸೋಲುವ ಮನಸ್ಸಿಲ್ಲ;
ಹರಿಯದ ಕಣ್ಣೀರು ಬೆವರಾಗಿ ಸುರಿಯುತ್ತದೆ,
ನೋವಿನ ವಾಸನೆ
ನನ್ನೊಳಗೆ ಅಮರಿಕೊಂಡಿದೆ...............

ನಿರಂತರ ನೆಮ್ಮದಿಯ ಹಾದಿಯಲ್ಲಿ
ಮುನ್ನಡೆಯುತ್ತಿದೆ ನನ್ನಾತ್ಮ.
ತನ್ನ ನಿಜ ಅಸ್ತಿತ್ವವನ್ನೇ ಅದು ಮರೆತು
ನನ್ನಿಂದಲೇ ದೂರ ಓಡುತ್ತಿದೆ.

ಅದಕ್ಕೇನೂ ನನ್ನ ಪರಿವೆಯಿಲ್ಲ:
ಆದರೆ ನಾನಿನ್ನೂ ಅದರೊಡನಿದ್ದೇನೆ!!!!!!!


೧೧-೦೭-೨೦೦೭

ನೀರು ಹರಿಯುವ ತಿರುವಿನಲ್ಲಿರುವ
ಮರದ ಕೊಂಬೆಗೆ
ನಮ್ಮ ಹರಯದ ಅಂಗಿ ಸಿಕ್ಕಿ ಹರಿದಮೇಲೆ,
ಹಾಗೇ ಗಂಭೀರವಾಗಿ ಸಾಗಿದ್ದೇವೆ;

ಪ್ರವಾಹದಲ್ಲಿನ ಕಲ್ಲು ಮುಳ್ಳುಗಳ ಬಡಿತಕ್ಕೆ
ನೀನು ಕಂಗಾಲಾಗದೆ
ನನ್ನನ್ನೂ ಸಮಾಧಾನಪಡಿಸಿರುವೆ.

ಆಳದ ಕಣಿವೆಯಲ್ಲಿ ಬಿದ್ದು
ಒಡೆದುಹೋದ ಹುಡುಗಾಟದ ಮಾತುಗಳ
ಮೌನವಾಗಿ ಸಹಿಸಿದ್ದೇವೆ......

ನಿನ್ನನ್ನು ಅರ್ಥಮಾಡಿಕೊಂಡಿದ್ದೆ!
ನೀನು ಒಗಟಾದಮೇಲೂ
ನೀನು ಒರಟಾದಮೇಲೂ
ಸಹಿಸಿಕೊಂಡಿದ್ದೇನೆ!!!

ಮರುಭೂಮಿಯ ಮರಳದಿಬ್ಬಕ್ಕೆ ಆತುಕೊಂಡಿದ್ದೇವೆ.
ನಾ ನಿನ್ನ ತಬ್ಬಿಕೊಂಡಿದ್ದೇನೆ,
ನಿನ್ನ ಪ್ರೀತಿ ನನ್ನ ತಬ್ಬಿದೆ.

ಹೊಂದಿಸಿ ಬರೆಯಿರಿ

ನಿನ್ನೆದಿನದ ನಸುಕಿನ್ನಲ್ಲಿ                      ಇಬ್ಬನಿಯೊಡನಾಟ
ಚಳಿಗೆ ಮೈ ಕೊರೆದರೂನೂ                 ನಿಸರ್ಗ ಸೊಬಗಿನೂಟ
ವನದೊಳಿರುವ ಹಾರು ಹಕ್ಕಿಯ            ಚಿಲಿಪಿಲಿ- ಪಕ್ಷಿಕೂಟ
ಬನದ ಹುಲ್ಲಿನಲ್ಲಿ ನಿಂತರೆ                     ಸೂರ್ಯೋದಯದ ನೋಟ
ಪ್ರಕೃತಿಯ ಆಕೃತಿಯೆಂಬುದು               ಜಗವ ಸವಿವ ಪಾಠ


(ಬೇಕಾದ ಹಾಗೆ ಹೊಂದಿಸಿ; ಹೊಂಒದಿಸಿದಷ್ಟೂ ಕವಿತೆಗಳು)

12th June, 20011

ನಾನಿನ್ನೂ ಅಲ್ಲೇ ಕುಳಿತಿದ್ದೇನೆ........

ಹೊತ್ತು ಎಷ್ಟೆಂದು ಗೊತ್ತಿಲ್ಲ,
ಹೊತ್ತುತಂದ ಚೀಲ ಹತ್ತಿರದಲ್ಲೇ ಇದೆ.
ಮತ್ತೆ ನೀ ಬಂದು
ನನ್ನ ಹೊತ್ತೊಯ್ಯುವೆಯೆಂಬ ಕನಸು;
ನಾನು ಕನಸೊಳಗೇ ಇರಬಯಸುತ್ತೇನೆ....

ಹತ್ತು ಹಲಗೆಯ ಮೇಲೆ ಕುಳಿತು ಅತ್ತಿದ್ದೇನೆ,
ನೀ ಬಂದೀಯೆಂಬ ಭ್ರಮೆಯೊಳಗೆ ಸುತ್ತಿದ್ದೇನೆ;
ಕತ್ತೆತ್ತಿ ರಾಶಿನಕ್ಷತ್ರಗಳ ನೋಡಿ
ಮತ್ತೆ ಭ್ರಮೆಯೊಳಗೆ ನುಗ್ಗಿದ್ದೇನೆ.....

ನೀನು ದೂರಾಗಿ
ದೂರ ನೋವಾಗಿ
ನೋವು ಕಣ್ಣೀರಾಗಿ ಹರಿದು ಹೋಗುತ್ತದೆ;
ದೂರುವುದರಿಂದಾಗಲಿ,
ದೂರಾಗುವುದರಿಂದಾಗಲೀ,
ಸಂಭಂದಗಳು ಹರಿದುಹೊಗುವುದಿಲ್ಲ.

ನಾನಿನ್ನೂ ಅಲ್ಲೇ ಕುಳಿತಿದ್ದೇನೆ.........
ಈ ಕಾಯುವ ಕ್ರಿಯೆಗೆ ಕೊನೆಯಿಲ್ಲ.