ಮಂಗಳವಾರ, ಜುಲೈ 12, 2011

ಕಿಟಕಿ ತೆರೆದಾಗ.......(ಕಥೆಯಂತಾ ಕಥೆ)

ನಮ್ಮದು ಮಲೆನಾಡಿನ ಹಳೆಯಕಾಲದ ಮನೆ. ಮೇಲಿನ ಬಾಲ್ಕನಿಯೊಂದನ್ನು ಹೊರತುಪಡಿಸಿದರೆ, ಮನೆಗೆ ಹೊದೆಸಿದ ಹೆಂಚುಗಳು ಮಾತ್ರ ಬಿಸಿಲನ್ನು ಕಾಣುತ್ತವೆ. ಮನೆಯ ಹೊರಗೋಡೆಗಳಿಗೆ ಒಟ್ಟೂ ಮೂರು  ಮತ್ತು ಒಳಗೋಡೆಗಳಿಗೆ ಆರು ಕಿಟಕಿಗಳಿವೆ. ಬೆಳಕಿಗೆ ಬರಗಾಲ. ಬಾಲ್ಕನಿಯಲ್ಲಿ ಕೂತರೆ ಸುತ್ತೆಲ್ಲ ಮರಗಳು, ಮನೆಯ ಹಿಂದುಗಡೆಯೋ ದೊಡ್ಡ ಗುಡ್ಡ. ಹೀಗಾಗಿ ಬಹುತೇಕ ವರ್ಷದ ಎಲ್ಲಾ ಕಾಲಗಳಲ್ಲೂ ಸಂಜೆ ಐದು ಘಂಟೆಗೇ ರಾತ್ರಿಯಾದಂತೆನ್ನಿಸಿಬಿಡುತ್ತದೆ.

ಒಳಗೋಡೆಯ ಕಿಟಕಿಗಳು ಯಾವತ್ತೂ ಮುಚ್ಚಿರುತ್ತವೆ. ಅವುಗಳನ್ನು ಇರಿಸುವ ಆವಶ್ಯಕತೆಯೇನಿತ್ತೋ ಗೊತ್ತಿಲ್ಲ. ಯಾವಾಗಲಾದರೊಮ್ಮೆ ಅದರ  ಬಗ್ಗೆ ಅಜ್ಜಿಯಲ್ಲಿ ಪ್ರಶ್ನೆಯಿಟ್ಟಾಗ ಅಜ್ಜಿ ಹೇಳುತ್ತಾಳೆ-" ಇದು ನಿನ್ನ ಅಜ್ಜನ ಅಜ್ಜ ಕಟ್ಟಿಸಿದ ಮನೆ, ಆವತ್ತಿನ ಕಾಲಕ್ಕೆ ಹೇಗಿರಬೇಕಿತ್ತೋ ಹಾಗಿದೆ. ಈಗ ನಾವು ಇಷ್ಟವಿರಲಿ ಇಲ್ಲದಿರಲಿ ಹೊಂದಿಕೊಂಡು ಹೋಗಬೇಕು". ಅಜ್ಜಿ ಹೇಳಿ ಮುಗಿಸುವುದನ್ನೇ ಕಾದಿರುವವಳಂತೆ ನಾನು ಮತ್ತೆ ಪ್ರಶ್ನೆಯೆತ್ತುತ್ತೇನೆ-" ಅಲ್ಲಾ ಅಜ್ಜಿ, ಇದು ಇಷ್ಟ- ಕಷ್ಟದ ಪ್ರಶ್ನೆಯಲ್ಲ. ಈಗೇನೋ ಮನೆಯಲ್ಲಿ ಬೆಳಕಿಗೆ ವಿದ್ಯುತ್ ದೀಪವಿದೆ; ಅಜ್ಜನ ಅಜ್ಜ ಮನೆ ಕಟ್ಟಿಸುವ ಕಾಲಕ್ಕೆಲ್ಲ ಎಣ್ಣೆದೀಪ! ಮನೆಯೊಳಗೆಲ್ಲ ಕತ್ತಲೆಯೇ ತುಂಬಿರುವುದೆಂದು ಗೊತ್ತಿದ್ದೂ, ಸರಿಯಾದ ಕಿಟಕಿ ಮಾಡಿಸಲಿಲ್ಲವಲ್ಲಜ್ಜಿ!? ತೆರೆದ ಜಗುಲಿ ಮತ್ತು ಅಡ್ಡ ಓರಿ ಬಿಟ್ಟರೆ ಮತ್ತೆಲ್ಲಿ ಹಗಲುಬೆಳಕು ಕಾಣುತ್ತೀ ನೀನು ಇಷ್ಟು ದೊಡ್ಡ ಮನೆಯೊಳಗೆ?"

ಆಜ್ಜಿಯ ಮುಖ ಕುಂದುತ್ತದೆ, " ಮಗಳೇ, ನಿನ್ನ ಪ್ರಶ್ನೆಗೆ ನನ್ನಲ್ಲಿ ಉತ್ತರವಿಲ್ಲ; ನಮ್ಮ ಕಾಲದವರ್ಯಾರೂ ನಿನ್ನಂತೆ/ನಿಮ್ಮಂತೆ ಯೋಚಿಸಿಲ್ಲ. ಮದುವೆಗೂ ಮೊದಲು ಮನೆಕೆಲಸ ಕಲಿಯುವ ಜವಾಬ್ಧಾರಿ, ಮದುವೆಯಾದಮೇಲೆ ಮಕ್ಕಳ ಜವಾಬ್ಧಾರಿ, ಮುಗಿಯಿತು ಇಷ್ಟೇ..... ನಮ್ಮ ಜೀವನದ ಉದ್ಧೇಶ ಬಹಳ ಸರಳವಾದ್ದು- "ಮನೆಮಂದಿಯೆಲ್ಲ ನೆಮ್ಮದಿಯಿಂದಿರಬೇಕು". ನಾವ್ಯಾರೂ ನಮ್ಮ ಸಂತಸದ ಬಗ್ಗೆ ಯಾವತ್ತೂ ಯೋಚಿಸಿಲ್ಲ. ನಿನ್ನಂತೆ ನಾವ್ಯಾರೂ ಹಬ್ಬಕ್ಕೆಲ್ಲ ಹೊಸ ಬಟ್ಟೆ ಬೇಕೆಂದಾಗಲಿ, ವರ್ಷಕ್ಕೆ ನಾಲ್ಕುಜೊತೆ ಚಪ್ಪಲಿ ಬೇಕೆಂದಾಗಲಿ ಹಟ ಹಿಡಿದಿರಲಿಲ್ಲ. ನಮ್ಮ ಕಾಲದಲ್ಲೆಲ್ಲ ವರ್ಷಕ್ಕೆ ನಾಲ್ಕು ಸೀರೆ ಸಿಕ್ಕರೆ ಮುಗಿಯಿತು, ಅದರಲ್ಲೇ ನಿತ್ಯ ಉಡುಗೆಗೂ, ನೆಂಟರ ಮನೆಗೂ ನಿಭಾಯಿಸಬೇಕು. ಆದರೆ ಇದ್ಯಾವುದೂ ನಮಗೆ ಬೇಜಾರಿನ ವಿಷಯಗಳಾಗಿರಲಿಲ್ಲ. ವರ್ಷಕ್ಕೆರಡು ತೊಲೆ ಬಂಗಾರ ನಮ್ಮ ಪೆಟ್ಟಿಗೆ ಸೇರುತ್ತಿದ್ದುದು ಮಾತ್ರ ಸದಾ ನೆಮ್ಮದಿ ತರುವ ವಿಷಯವಾಗಿತ್ತು.

ಇಷ್ಟು ಬಿಟ್ಟರೆ ದೇವರು. ದೇವರಿಗೆ ನೀನೇನು ನೋಡಿಲ್ಲ ಹೇಗೆ ನಂಬುತ್ತೀಯಜ್ಜಿ ಅಂದು ನೀ ಕೇಳುತ್ತೇಯೆ. ನೀನಾದರೋ ಶಾಲಾ ಪ್ರವಾಸವೆಂದು ನಾಲ್ಕಾರು ಊರು ಸುತ್ತಿದವಳು, ಶಿಭಿರಗಳೆಂದು ಹಲವಾರು ಕಡೆ ಹಲವು ವಿಷಯ ತಿಳಿದವಳು, ನಿನಗೆ ಬೇಕಾದ್ದೆಲ್ಲ ಓದಬಲ್ಲೆ. ಹೀಗಿರುವಾಗ, ನಿನ್ನ ಬುದ್ಧಿ ಬೆಳೆದಿದೆ, ನಿನ್ನೊಳಗೆ ನೀ ವಿಚಾರಮಾಡುತ್ತೀಯೆ. ನಾವಾದರೋ, ಯಾವುದನ್ನಾದರೂ ಇದೆಯೋ,ಇಲ್ಲವೋ ಎಂಬ ಪರಾಮರ್ಷೆಗೆ ಹೋಗುವುದಿಲ್ಲ.ನಾನು ದೇವರನ್ನು ನಂಬುತ್ತೇನೆ, ಈ ನಂಬಿಕೆಯಿಂದ ನನ್ನ ಜವಾಬ್ಧಾರಿ ಕಡಿಮೆಯದಂತೆನ್ನಿಸುತ್ತದೆ.
ನಾವೆಲ್ಲ ನೆಮ್ಮದಿಯಿಂದಿರಬೇಕೆಂದುಕೊಂಡು ಬದುಕಿದವರು, ಜೀವನದಲ್ಲಿ ನಮಗಿನ್ನೇನೂ ಉದ್ಧೇಶವಿರಲಿಲ್ಲ".  ನಾನು ಕೇಳುವುದೊಂದು ಈ ಅಜ್ಜಿ ಹೇಳುವುದೊಂದು!!

ಒಮ್ಮೊಮ್ಮೆ ಯೋಚಿಸುತ್ತಿರುತ್ತೇನೆ- ನಮಗೆಲ್ಲ ನೆಮ್ಮದಿಯ ಬಗೆಗೆ ಯೋಚಿಸುವಷ್ಟು ಸಮಯವಾದರೂ ಎಲ್ಲಿದೆ? ನಾವೆಲ್ಲ ನಮ್ಮ ಉದ್ಧೇಶದ ಈಡೇರಿಕೆಯಲ್ಲೇ ಮುಳುಗಿಬಿಟ್ಟಿದ್ದೇವೆ. ಮಾಧ್ಯಮಗಳ ಮೂಲಕವಾಗಿ ನಮಗೆ ಸಾಧಕರ ಸಂಪರ್ಕ ಜಾಸ್ತಿಯಾಗಿದೆ( ಏಕಮುಖ ಸಂಪರ್ಕವಾಗಿದ್ದರೂ ಸಹ). ನಾನೂ ಏನನ್ನಾದರೂ ಸಾಧಿಸಿ ಪ್ರಸಿದ್ಧಿಗಳಿಸಬೇಕೆಂಬ ಛಲಹೊತ್ತು ನಡೆಯುತ್ತಿದ್ದೇವೆ. ನಾವು ನಮಗಾಗಿಯಲ್ಲ, ಸಮಾಜದಲ್ಲಿ ನಮ್ಮ ಸ್ಥಾನ ಹೆಚ್ಚಿಸಲಾಗಿ ಹೋರಾಡ ಹೊರಟಿದ್ದೇವೆ; ಇಲ್ಲಾ, ಹಣದ ಬೆನ್ನುಹತ್ತಿದ್ದೇವೆ. ಗುರಿತಲುಪಿದಾಗ ಮಾತ್ರ ನೆಮ್ಮದಿ ಸಿಕ್ಕೀತೆಂಬ ಭ್ರಮೆಯಲ್ಲಿದ್ದೇವೆ. ಸಾಧನೆ ಎಂಬುದು ಕೊನೆಯಿಲ್ಲದ್ದು, ಈ ಗುರಿ ತಲುಪಿಯಾದಮೇಲೆ ಇನ್ನೊಂದು ಗುರಿಗಾಗಿ ಮುನ್ನಡೆದುಬಿಡುತ್ತೇವೆ ಎಂಬ ಪರಿವೆಯೂ ಇಲ್ಲದೇ ನೆಮ್ಮದಿಯ ಯೋಚನೆಯನ್ನೇ ಕೈಬಿಟ್ಟಿದ್ದೇವೆ. ಒಟ್ಟಿನಲ್ಲಿ ನೆಮ್ಮದಿಯ ಆವಶ್ಯಕತೆ ನಮಗಿಲ್ಲವಾಗಿದೆ.

ಮೊನ್ನೆ ಊರಿಗೆ ಹೋದಾಗ, ಮಧ್ಯಾಹ್ನ ಊಟಮಾಡಿ ಎಲ್ಲರೂ ಮಲಗಿದ್ದರು. ನಾನು ಬಾಲ್ಕನಿಯಲ್ಲಿ ಓದುತ್ತಾ ಕುಳಿತಿದ್ದೆ. ಅಜ್ಜಿ ಅಂಗಳದಲ್ಲಿ ನಿಂತು ನನ್ನನ್ನು ಕರೆದಳು, ತನ್ನ ಕೋಣೆಗೆ ಕರೆದೊಯ್ದಳು. ಒಳಗೆ ಹೋಗುತ್ತಿದ್ದಂತೆ ವಿದ್ಯುತ್ ನಿಂತಿತು. ಪಕ್ಕದ ದೇವರ ಕೋಣೆಗೆ ಹೋಗಿ ಅಜ್ಜಿ ಮೊಂಬತ್ತಿ ದೀಪತಂದು, ಮೇಲೆ ತೂಗು ಹಾಕಿದ್ದ ಲಾಟೀನಿನಿಂದ ಕೋಣೆಯೆಲ್ಲ ಬೆಳಕಾಗಿಸಿದಳು. ಟ್ರಂಕಿನಿಂದ ಯಾವುದೋ ಕೀಲಿಕೈ ತೆಗೆದ ಅಜ್ಜಿ ಕಿಟಕಿಯ ಕಡೆಗೆ ಧಾವಿಸಿ ಕೀಲಿಯಿಂದ ಕಿಟಕಿಯನ್ನು ತೆರೆಯ ಹೊರಟಳು. ನನಗೇನೂ ಅರ್ಥವಾಗಲಿಲ್ಲ!

ಕಿಟಕಿ ತೆರೆದಾಗ ಅತ್ತಕಡೆ ದೇವರ ಕೊಣೆಯ ಕಡೆಯಿಂದ ಕಿಟಕಿ ಬಾಗಿಲು ಮುಚ್ಚಿರುವುದು ಗೊತ್ತಾಯಿತು. ಆದರೆ, ಆಕೆ ಕಿಟಕಿ ಚೌಕಟ್ಟನ್ನು ಕೆಳಕ್ಕೆ ತಳ್ಳಿದಾಗ ಏನಾಯಿತೆಂದು ಗೊತ್ತಾಗಲಿಲ್ಲ! ಬಂಗಾರದ ಗಣಿ!! ಚೌಕಟ್ಟಿನ ಮೇಲೆ ಅಂದರೆ, ಗೋಡೆಯೊಳಗೆ ಇರುವಂತೆ ಒಂದು ಪೆಟ್ಟಿಗೆ. ನನಗಾಗ ಗೊತ್ತಾಯಿತು ಅದು ಕಿಟಕಿಯೂ ಹೌದು ಜೊತೆಗೆ, ಬೆಲೆಬಾಳುವ ವಸ್ತುಗಳನ್ನಿದುವ ಖಜಾನೆಯೂ ಹೌದು. ನಾನು ಇದನ್ನು ಹೇಳಿ ಕಳ್ಳರಿಗೇನೂ ಆಹ್ವಾನ ಕೊಡುತ್ತಿಲ್ಲ. ಕಿಟಕಿಯ ಚೌಕಟ್ಟುಗಳು ಗೆದ್ದಲು ಹಿಡಿದು ಹಾಳಾಗುತ್ತಿವೆ, ಇನ್ನು  ಅಲ್ಲಿ ಆಭರಣಗಳನ್ನು ಇಡಲು  ಸಾಧ್ಯವಿಲ್ಲವೆಂದು ಅಜ್ಜಿ ಮತ್ತು ಅಪ್ಪ ನಿರ್ಧರಿಸಿ, ಅವನ್ನೆಲ್ಲ ಬ್ಯಾಂಕ್ ಲಾಕರ್ ಗೆ ಒಯ್ಯಲು ತಯಾರಾಗಿದ್ದರು. ಒಯ್ಯುವ ಮೊದಲು ನನಗೊಮ್ಮೆ ಕಿಟಕಿಯ ಗುಟ್ಟು ತಿಳಿಸುವ ಸಲುವಾಗಿ ಅಜ್ಜಿ ಕಿಟಕಿ ತೆರೆದಿದ್ದಳು!!!!

ಅಜ್ಜಿಗಂತೂ ಈಗ ನೆಮ್ಮದಿಯೇ ಇಲ್ಲವಾಗಿದೆ; ಬ್ಯಾಂಕ್ ಮುಳುಗಿಹೋದೀತೆಂಬ ಭಯ! ಇತ್ತಕಡೆ, ನಾನೂ ನೆಮ್ಮದಿಯ ಬಗೆಗೆ ಯೋಚಿಸಿದಾಗಲೆಲ್ಲ ನೆಮ್ಮದಿಕಳೆದುಕೊಂಡಂತೆ ಆಡುತ್ತೇನೆ; ನನಗೂ ಅಷ್ಟೇ, ನಾನಂದುಕೊಂಡದ್ದನ್ನು ಸಾಧಿಸಲಾಗದಿದ್ದರೆ ಎಂಬ ಭಯ!!!!

2 ಕಾಮೆಂಟ್‌ಗಳು: