ಶುಕ್ರವಾರ, ಮಾರ್ಚ್ 16, 2018

ಮಾಲು! ಅಮಲು! (ಕಥೆ)

ಕಾಲೇಜಿನಲ್ಲಿ ಪಿಯೂಸಿ ಓದುತ್ತಿರುವಾಗ ನಡೆದ ಘಟನೆಯೊಂದು ಸುಮಾರು ವರುಷ ನನ್ನನ್ನು ಕಾಡಿದೆ. ಘಟನೆಗೊಂದು ಪೀಠಿಕೆ ಹಾಕಿ ವಿವರಿಸುತ್ತೇನೆ.

ಕವನ ಬರೆಯುವ ಲಹರಿ ಬಂತೆಂದರೆ ಕಾಲೇಜಿನ ಹಿಂದಿನ ತೋಟದಲ್ಲಿರುವ ಬಾವಿ ಕಟ್ಟೆಯ ಹಿಂದೆ ಹೋಗಿ, ಚಿಕ್ಕೂ ಮರದ ನೆರಳಿನಲ್ಲಿ ಕುಳಿತು ಬರೆದೇ ತಿರುತ್ತಿದ್ದೆ. ಏಕನಮಿಕ್ಸ್ ಕ್ಲಾಸ್ ಇರಲಿ, ಜಿಯಾಗ್ರಾಫಿ ಇರಲಿ, ಅಕಂಟೆನ್ಸಿಯೇ ಇರಲಿ, ಲಹರಿ ಬಂದಾಗ ಬರೆಯದೇ ಬೇರೆ ವಿಧಿಯಿಲ್ಲ ಎಂಬಂತೆ ಆಗುತ್ತಿದ್ದೆ.

ಆ ದಿನ ಹತ್ತು ಗಂಟೆಗೆ ಪ್ರಾರ್ಥನೆ ಮುಗಿಸಿ ಬುಕ್ ಹಿಡಿದು ಬಾವಿಯ ಕಡೆಗೆ ಹೊರಟೆ. ಆದರೆ, ಆಗಲೇ ಯಾರೋ ಅಲ್ಲಿ ಬಂದು ಕುಳಿತಿರುವುದಕ್ಕೆ ಸಾಕ್ಷಿಯಂತೆ ಒಂದು ಬ್ಯಾಗ್ ಕಾಣಿಸಿತು. ಬ್ಯಾಗಿನ ಮೇಲೆ ಒಂದು ತುಂಬಾ ಪುಟ್ಟಗಿನ ಸ್ಟೀಲ್ ಡಬ್ಬ. ಮುಂದೆ ಹೋದಂತೆ ಇಬ್ಬರು ಹುಡುಗರ ತಲೆಯೂ ಕಾಣಿಸಿತು- ಅದೇ ಓಪಶನಲ್ ಕ್ಲಾಸ್ ನ ಪ್ರಶ್ನೆಯ ಭಂಡಾರಗಳು! ತಿಂಡಿ ತಿನ್ನಲು ಬಂದು ಕುಳಿತಿರಬಹುದೆಂದು; ಪುಟ್ಟ ಡಬ್ಬಿಯಲ್ಲಿ ಚಟ್ನಿಯೋ, ಚಟ್ನಿ ಪುಡಿಯೋ ಇರಬಹುದೆಂದು ಊಹಿಸಿದೆ. ತಿಂದಾದ ಮೇಲೆ ಎದ್ದು ಹೂಗಬಹುದೆಂದು ತಿಳಿದು, ಪಕ್ಕದಲ್ಲಿದ್ದ ಮಾವಿನ ಮರದ ಬೋಡ್ಡೆಯ ಬುಡಕ್ಕೆ ಹೋಗಿ ಕುಳಿತು ಕವಿತೆ ಬರೆಯಲು ಪ್ರಾರಂಭಿಸಿದೆ.

ನಾನು ಕುಳಿತ ಮಾವಿನ ಮರ ಬಾವಿಗಿಂತಲೂ ಸ್ವಲ್ಪ ಹಿಂದೆ ಇದ್ದುದ್ದರಿಂದ ನಾನು ಬಂದು ಕುಳಿತದ್ದು ಅವರಿಗೆ ಗೊತ್ತಾಗಲಿಲ್ಲ. ನನಗವರ ಮಾತು ಸ್ಪಷ್ಟವಾಗಿ ಕೇಳಿಸುತ್ತಿತ್ತು. ಅವರ ಹೆಸರುಗಳನ್ನಿಲ್ಲಿ ಪ್ರಸ್ತಾಪಿಸುವುದು ಬೇಡ; ಒಬ್ಬನಿಗೆ ಹೆಗಡೆ ಎಂದೂ, ಇನ್ನೊಬ್ಬನಿಗೆ ಭಟ್ಟ ಎಂದೂ ಕರೆಯೊಣ. ಬರೆಯುವುದನ್ನು ಒಂದು ಹಂತಕ್ಕೆ ನಿಲ್ಲಿಸಿ, ಅವರ ಸಂಭಾಷಣೆಯ ಕಡೆಗೂ ಸ್ವಲ್ಪ ಕಿವಿಗೂಟ್ಟೆ. ಹೀಗೆ ಕದ್ದಾಲಿಸಿದ್ದೆ ತಪ್ಪಾಯಿತು!!! ನಡೆಯಬಾರದ್ದು ನಡೆಯುತ್ತಿರುವುದು ಅರಿವಿಗೆ ಬಂತು. ನನ್ನೂರಲ್ಲಿ, ಅದೂ ಹಳ್ಳಿಯ ಕಾಲೇಜಿನಲ್ಲಿ ಯಾರೂ ಉಹಿಸದೇ ಇರುವ೦ಥದ್ದು ನನಗೆ ಗೊಚರಿಸಿ, ಮನಸ್ಸೆಲ್ಲ ಹಾಳಾಯಿತು.

ಅವರ ಸಂಭಾಷಣೆ ಹೀಗಿತ್ತು-
ಹೆಗಡೆ-"ಏನೋ ದೋಸ್ತ, ಇದು ಕಿಕ್ಕೇ ಇಲ್ಲ?"
ಭಟ್ಟ-"ಬಾಯಲ್ಲಿಟ್ಟ ಕೂಡಲೇ ಉರಿ ಹತ್ತಲಿಕ್ಕೆ ಇದೇನು ಮೆಣಸಿನ ಕಾಯಿಯ?! ತಾಳ್ಮೆ ಇರಲಿ"
ಹೆಗಡೆ-" ಮಾಲು ಎಲ್ಲಿಯದು?"
ಭಟ್ಟ-"ಅದೇ, ಗೋವಾ ಪೂಜಾರಿ"
ಹೆಗಡೆ-"strong ಪುಡಿಯನ್ನು ಸೆರಿಸಿದ್ದಾನಾ ಕೇಳಿ ತಂದ್ಯಾ?"
ಭಟ್ಟ-"ಮೂರೂ ವರುಷದಿಂದ ಕೊಡ್ತಾ ಇರೋವ್ನಿಗೆ ಮತ್ತೆಂತ ಕೇಳಿ ತರದು?"
ಹೆಗಡೆ-" ಗೋವಾ ಪೂಜಾರಿಯಿಂದ ತಗಳವಾಗ್ಲೆ ಒಂದ್ಸಲ ಮೂಸಿ ನೋಡೇ ತರಬೆಕಿತ್ತು. ಈ ಸಲದ್ದು ಮಾಲು ಏನೇನೂ ಸರಿಯಿಲ್ಲ. special ಪುಡಿ ಹಾಕಿದ್ದೇ ಸುಳ್ಳು"
ಭಟ್ಟ-"ಏಯ್! ಸುಮ್ನಿರೊ. ಸಿಕ್ತಾ ಇರೋದೇ ಹೆಚ್ಚು, ಇವನ ತಲೆಹರಟೆ ಬೇರೆ! ಗೋವಾ ಪೂಜಾರಿ ಆಗಿದ್ದಕೆ ಎಲ್ಲಿಂದಾದ್ರು ತಂದು ಕೊಡ್ತಾ ಇರದು, ಅದೂ special ಪುಡಿ ಹಾಕಿ. ಮನುಷ್ಯನಿಗೆ ನಂಬಿಕೆ ಮುಖ್ಯ. ನೀನು ಮತ್ತೆ ಬಾಯಿ ತೆಗದ್ರೆ, ನಾನು ನಿನನ್ನ ಈ ಬಾವಿಗೆ ನೂಕದು ಗ್ಯಾರಂಟಿ!"

ಅಲ್ಲಿಗೆ ಹೆಗಡೆ ಸುಮ್ಮನಾದ. ಭಟ್ಟನೂ "ನಶಾ ಹೆ ಪ್ಯಾರ್ ಕ ನಶಾ ಹೆ" ಎಂದು ಹಾಡು ಗುನುಗುತ್ತ ಕುಳಿತ. ಸ್ವಲ್ಪ ಹೊತ್ತಿಗೆ ಪುಟಾಣಿ ಸ್ಟೀಲ್ ಡಬ್ಬಿಯ ಮುಚ್ಚಳ ಹಾಕಿದ ಸದ್ದೂ ಕೇಳಿಸಿತು. ಅವ್ರು ಎದ್ದು ಹೊರಟರೆ, ನಾನು ಮಾವಿನ ಮರದಡಿ ಕುಳಿತಿರುವುದು ಕಾಣಿಸಿದರೆ- ಎಂದು ಭಯವಾಗಿ, ಸದ್ದು ಮಾಡದೇ ವೇಗವಾಗಿ ನಡೆದು ಕಾಲೇಜ್ ಕಡೆಗೆ ಹೋಗಿ, ಲೈಬ್ರರಿ ಯಲ್ಲಿ ಕುಳಿತೆ. ನನ್ನ ಬಳಿ ಯಾವುದೇ ಸಾಕ್ಷಿ ಇಲ್ಲವೆಂದು ಯಾರಿಗೂ ದೂರು ಕೊಡಲು ಹೋಗಲಿಲ್ಲ. ಇಂಥ ವ್ಯಸನಿಗಳು ನನಗೆಲ್ಲಾದರು ತೊಂದರೆ ಮಾಡಿದರೆ ಎಂಬ ಭಯದಿಂದಲೂ ಸುಮ್ಮನಾದೆ.

ಸುಮಾರು ವರ್ಷಗಳ ನಂತರ, ಬೆಂಗಳೂರಿನಲ್ಲಿ ನಾನು ಕೆಲಸ ಮಾಡುತ್ತಿದ್ದ ಒಂದು ಟೆಕ್ ಪಾರ್ಕ್ ಬದಿಯಲ್ಲಿರುವ ಟೀ ಅಂಗಡಿಯಲ್ಲೊಂದು ದಿನ ಭಟ್ಟ ಸಿಕ್ಕಿದ. ಹಳೆಯದೆಲ್ಲ ನೆನಪದರೂ, ನನ್ನ ಉರಿನವ ಎಂದೂ, ನನ್ನ ಕ್ಲಾಸ್ ಮೇಟ್ ಎಂದೂ ಖುಷಿಯಿಂದ ಚೆನ್ನಾಗಿಯೇ ಮಾತನಾಡಿದೆ. ನಂತರ ದಿನಗಳಲ್ಲಿ ಟೀ ಅಂಗಡಿಗೆ ಬಂದಾಗ ಆಗಾಗ ಸಿಗುತ್ತಿದ್ದ. ಚೆನ್ನಾಗಿ ಗೆಳೆತನ ಆದಮೇಲೆ ಒಂದು ದಿನ ಕೇಳಿದೆ- "ಸಿಗರೇಟು ಸೆದಲ್ವಾ?"
ಅವನ ಉತ್ತರ-"ಇಲ್ಲ"
"ಕುಡಿತ?"
"ನೋ!"
"ಸುಳ್ಳು ಹೇಳುತಿಯಾ?"
"ಸಿಗರೇಟು ಸೇದದಿರುವುದಕ್ಕೆ ಟೀ ಅಂಗಡಿಯವನೆ ಸಾಕ್ಷಿ!"
"ಹಾಗಾದರೆ, ಗಾಂಜಾ, ಹೆರಾಯಿನ್ ಮಾತ್ರ?"
"ಯಾರು?!!!!"ಎಂದನು ಜೋರಾಗಿ ನಗಹತ್ತಿದ. "ಏನಂದುಕೊಂಡಿದ್ದಿಯ ನನ್ನ?" ಎಂದು ಗಂಭೀರನಾದ. ನಾನು ಅಂದು ನಡೆದ ಘಟನೆಯನ್ನು ನಾನು ಕಂಡಂತೆ,ಕೇಳಿಸಿಕೊಂದಂತೆ ವಿಸ್ತಾರವಾಗಿ ವಿವರಿಸಿದೆ.

ಅವನು " ಕಾಲೇಜಿನ ಪ್ರಿನ್ಸಿಪಾಲರಿಗೊ, ಪೊಲೀಸ್ ಗೋ ದೂರು ದಾಖಲಿಸದುದಕ್ಕೆ ತುಂಬಾ ಧನ್ಯವಾದಗಳು ಮಾರಾಯ್ತಿ!"

"ಅವತ್ತು ನೀನು ನಮ್ಮನ್ನು ಅಲ್ಲಿಯೇ ಮತನಾಡಿಸಿದ್ದರೆ ವಿಶೇಷ ರುಚಿಯ ಕಬ್ಬಿನ ಹಾಲು ಸಿಗುತ್ತಿತ್ತಲ್ಲ!! ಗೋವಾ ಪೂಜಾರಿ ಒಬ್ಬ ಕಾಳು ಮೆಣಸಿನ  ವ್ಯಾಪಾರಿ. ಆಸುಪಾಸಿನಲ್ಲಿ ಎಲ್ಲೇ ಆಲೆಮನೆ ಆದರೂ, ನಮಗೆ ಕಬ್ಬಿನ ಹಾಲನ್ನು ತರಿಸಿ ಕೊಡುತ್ತಿದ್ದ. ಅದಕ್ಕೆ ಶು೦ಠಿ ಮತ್ತು ಜಾಯಿ ಕಾಯಿ ಪುಡಿಯನ್ನು ಹದವಾಗಿ ಬೆರೆಸಿ ಕೊಡುತ್ತಿದ್ದ. ಜಾಯಿ ಕಾಯಿ ನಿದ್ದೆ ಬರಿಸಲೂ, ಶು೦ಠಿ ನಿದ್ದೆಯನ್ನು ತಡೆಯಲು ಸಹಕಾರಿ. ಅದನ್ನೇ ಒಂದು ರೀತಿಯ ಅಮಲೆಂಬ ಭ್ರಮೆಯಲ್ಲಿ ನಾವಿದ್ದೆವು. ಹೆಗಡೆ ಅವತ್ತು ಕಿಕ್ ಎಂದಿದ್ದು ಅದಕ್ಕೇ. ಮತ್ತು, ಅವನು ಹಾಲು ಎಂದಿದ್ದು ನಿನಗೆ ಮಾಲು ಎಂದು ಕೇಳಿಸಿರಬೆಕು."

" ಮತ್ತೆ ಆ ಪುಟಾಣಿ ಡಬ್ಬಿಯಲ್ಲಿ ಏನಿತ್ತು?"
"ಉಪ್ಪಿನಕಾಯಿ!!!!!"

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ