ಶುಕ್ರವಾರ, ಮಾರ್ಚ್ 30, 2018

ಊಟ - ವಸ್ತ್ರ (ಬಿಸಿಯೂಟ - ಸಮವಸ್ತ್ರ)


ಪುಟ್ಟ ಹಟ್ಟಿಯೊಳಗಿಂದ
ಇಣುಕುತ್ತಿದ್ದಾನೆ ಪುಟ್ಟ
ಲೋಕದ ಬೆಳಕಿಗೆ
ಮೈ ಒಡ್ಡಲಾಗದೇ.

ಹೊಟ್ಟೆಗೂ ಇಲ್ಲದ ಅನ್ನದ ವಾಸನೆಯನ್ನು
ಸವಿದು ಬರುತ್ತಾನೆ ಆಗಾಗ
ಹಟ್ಟಿಯಾಚೆಯ ಹೋಟೆಲಿನಲ್ಲಿ.

ತನ್ನಲ್ಲಿಲ್ಲದ ಅಂಗಿಯನ್ನು
ಕಂಡು ಬೆರೆಗಾಗುತ್ತಾನೆ ಆಗಾಗ
ಹಟ್ಟಿಯಾಚೆಯ ಹೊಲದ ಬೆಚ್ಚಿನಲ್ಲಿ(ಬೆದರುಗೊಂಬೆ).

ತಾನು ಗುನುಗುವ ಹಾಡುಗಳನ್ನು
ಬರೆಯಲೂಬಹುದೆಂಬ ಕಲ್ಪನೆಯಿಲ್ಲ,
ಬೆಪ್ಪಾಗಿ ನೋಡುತ್ತಾನೆ ಶಾಲೆಯ ಕಡೆಗೆ.
ಶಾಲೆಯೆದುರಿನ ಬೋರ್ಡಿನಲ್ಲಿರುವ
ಅನ್ನದ ಚಿತ್ರ, ಅಂಗಿಯ ಚಿತ್ರಗಳು
ಪುಟ್ಟನಲ್ಲೂ ಆಸೆ ಹುಟ್ಟಿಸುತ್ತವೆ!!

ಹೊಟ್ಟೆ ಹಸಿದು ಶಾಲೆಗೆ ಹೋದವನು
ಮತ್ತೂ ಹಸಿದು ಬರುತ್ತಾನೆ ಜ್ಞಾನಕ್ಕಾಗಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ