ಸೋಮವಾರ, ಏಪ್ರಿಲ್ 9, 2018

ಗೆಜ್ಜೆ


ಕಳೆದುಹೋದ ಬೆಳ್ಳಿ ಕಾಲ್ಗೆಜ್ಜೆಯ ಹುಡುಕಹೋಗಲಿಲ್ಲ.
ಕುಣಿಯುವಾಗ  ಬಿದ್ದು ಕಳೆದುದಲ್ಲ,
ಕಾಡುದಾರಿಯಲ್ಲೂ ಕಳೆದುದಲ್ಲ,
ಅಲ್ಲಿ ಇಲ್ಲಿ ಇಟ್ಟು ಮರೆತುದಲ್ಲ.

ಯಾರದೋ ಕಷ್ಟಕಾಲಕ್ಕೆ
ಕೊಟ್ಟದ್ದಕ್ಕೆ ಲೆಕ್ಕ ಇಡಬೇಕೆ?
ಕೊಟ್ಟು ಕೈ ತೊಳೆದುಕೊಂಡದ್ದಕ್ಕೆ
ಕಣ್ಣೀರಿಡಬೇಕೇ?!!

ಚಲನಚಿತ್ರದಂತೆ ಸರಿದುಹೋದ
ಜೇವನದ ಚಿತ್ರಗಳ ಮೇಲೆಲ್ಲ
ಕಾಲ್ಗೆಜ್ಜೆಯ ಹೆಜ್ಜೆ ಗುರುತು ಮೂಡಿದೆ.
ಕೆಲವೊಮ್ಮೆ ಕಾಲ್ಗೆಜ್ಜೆಯ ನೆನಪು
ನನ್ನನ್ನೇ ನಾನು ಕಳೆದುಕೊಂಡಂತೆ ಮಾಡಿದೆ.

ಕೊಟ್ಟದ್ದನ್ನು ತಿರುಗಿ ಕೇಳಲಾಗದೇ,
ಪಡೆದವರನ್ನು ಮರಳಿ ಕಾಣಲಾಗದೇ
ನನ್ನಲ್ಲೇ ಅಡಗಿಸಿಟ್ಟುಕೊಂಡ ತಲ್ಲಣ -
ಕನಿಕರವೋ, ಮುನಿಸೋ, ದುಃಖವೋ,
ಇಲ್ಲಾ ಪ್ರೀತಿಯೋ?!!

ಗುರುವಾರ, ಏಪ್ರಿಲ್ 5, 2018

ವ್ಯೋಮ

ಗುಂಡಗಿನ ಗೋಳದ ಪರಿಧಿಯಾಚೆಯಲಿ
ಕಾಲವೆಂಬುದು
ಕಾಲ ಕಸವಾಗಿದೆ.

ಬೆಳಕಿಲ್ಲದ ಬೇಲಿಯಾಚೆಯ
ಆಕಾಶ ಕಾಯಗಳು
ನಿಶೆಯ ಗೂಡಾಗಿವೆ.

ಕಾಯಗಳ ತಿರುಗುವಿಕೆಗೆ
ಕಾಲವಿರದ ಕರಗುವಿಕೆಗೆ
ಜಂಗಮದ ಹೆಸರಿಟ್ಟ ವಿಶ್ವದಂಗಳದಲ್ಲಿ-
ಚರ ಯಾವುದು? ಜಡ ಯಾವುದು?!!
ನೀ ನನ್ನ ಎದುರಿರಲು
ಹೃದಯದೊಳು ಮಳೆಗಾಲ,
ನಿನ್ನ ವಿರಹದೊಳೆಲ್ಲ
ಭಾವಕ್ಕೇ ಬರಗಾಲ.

ತತ್ವ

ಹೊತ್ತಿ ಉರಿದರೆ ಕ್ರಾಂತಿ
ಆರಿಹೋದರೆ ಶಾಂತಿ
ಹುಟ್ಟು ಸಾವಿನ ನಡುವೆ
ಇಲ್ಲ ವಿಶ್ರಾಂತಿ.

ಸಾವಿಲ್ಲದ ಮನೆಯಿಲ್ಲ
ನೋವಿಲ್ಲದ ಮನವಿಲ್ಲ,
ಜೀವಿಸುವ ಸಲುವಾಗಿ
ಎಲ್ಲ ಮರೆಯಬೇಕಲ್ಲ!!

ನಾಳೆ ನಿಶ್ಚಿತವಿಲ್ಲ
ನಿನ್ನೆ ಬದಲಾಗಿಲ್ಲ
ಇಂದು-
ನಾಳಿನ ಚಿಂತೆ
ನಿನ್ನೆಯ ನೋವು!

ಶುಕ್ರವಾರ, ಮಾರ್ಚ್ 30, 2018

ಊಟ - ವಸ್ತ್ರ (ಬಿಸಿಯೂಟ - ಸಮವಸ್ತ್ರ)


ಪುಟ್ಟ ಹಟ್ಟಿಯೊಳಗಿಂದ
ಇಣುಕುತ್ತಿದ್ದಾನೆ ಪುಟ್ಟ
ಲೋಕದ ಬೆಳಕಿಗೆ
ಮೈ ಒಡ್ಡಲಾಗದೇ.

ಹೊಟ್ಟೆಗೂ ಇಲ್ಲದ ಅನ್ನದ ವಾಸನೆಯನ್ನು
ಸವಿದು ಬರುತ್ತಾನೆ ಆಗಾಗ
ಹಟ್ಟಿಯಾಚೆಯ ಹೋಟೆಲಿನಲ್ಲಿ.

ತನ್ನಲ್ಲಿಲ್ಲದ ಅಂಗಿಯನ್ನು
ಕಂಡು ಬೆರೆಗಾಗುತ್ತಾನೆ ಆಗಾಗ
ಹಟ್ಟಿಯಾಚೆಯ ಹೊಲದ ಬೆಚ್ಚಿನಲ್ಲಿ(ಬೆದರುಗೊಂಬೆ).

ತಾನು ಗುನುಗುವ ಹಾಡುಗಳನ್ನು
ಬರೆಯಲೂಬಹುದೆಂಬ ಕಲ್ಪನೆಯಿಲ್ಲ,
ಬೆಪ್ಪಾಗಿ ನೋಡುತ್ತಾನೆ ಶಾಲೆಯ ಕಡೆಗೆ.
ಶಾಲೆಯೆದುರಿನ ಬೋರ್ಡಿನಲ್ಲಿರುವ
ಅನ್ನದ ಚಿತ್ರ, ಅಂಗಿಯ ಚಿತ್ರಗಳು
ಪುಟ್ಟನಲ್ಲೂ ಆಸೆ ಹುಟ್ಟಿಸುತ್ತವೆ!!

ಹೊಟ್ಟೆ ಹಸಿದು ಶಾಲೆಗೆ ಹೋದವನು
ಮತ್ತೂ ಹಸಿದು ಬರುತ್ತಾನೆ ಜ್ಞಾನಕ್ಕಾಗಿ.

ಗುರುವಾರ, ಮಾರ್ಚ್ 22, 2018

ಸೀರೆ

ಸೀರೆ ಸುತ್ತಿಕೊಂಡೇ
ಬಾಳು ಸವೆದವಳು ಅಮ್ಮ.

ಬಿಗಿಯಾದ ರವಿಕೆಯನು
ಎದೆಗೆ ಬಿಗಿದು,
ಬೇಸಿಗೆಯ ಬೆಂಕಿಗೆ
ಬೆವರಲಿ ತೊಯ್ದವಳು ನಿಡುಸುಯ್ಯಲಿಲ್ಲ.
ಅವಳಿಗೆ ಬೇರೆ ಉಡುಗೆಯೇ ಗೊತ್ತಿಲ್ಲ.

ಲೋಕದ ನಗೆಪಾಟಲಿಗೆ ಹೆದರಿ
ಅಮ್ಮನಿಗನ್ನಿಸಿದ್ದು " ಸೀರೆಯೇ ಸರಿ!"

ಯಾವ ಶಿಸ್ತಿಗೊಳಗಾಗಿ ನಮ್ಮ ಶಿಕ್ಷಕಿ
ಸೀರೆಯ ಶಿಕ್ಷೆಗೊಳಗಾದಳು?!
ಅರೆತೆರೆದ ಬೆನ್ನು, ಹೊರಗಿಣುಕುವ ಸೊಂಟ;
ಗಂಡಿನದೋ, ಗಂಡಸಿನದೋ ಕಣ್ಣು!
ಸಹಿಸಲಾಗದ ಮುಜುಗರದ ಸಂಕಟ!!

ಬದುಕಿನುದ್ದೇಶವ ನೋಡಿ-
ಶಿಕ್ಷಕಿಗನ್ನಿಸಿದ್ದು "ಸೀರೆಯಾದರೂ ನಡೆದೀತು ಬಿಡಿ"

ಇನ್ನು ಪುಟ್ಟ ಗೌರಿಗೆ (any actress)
ಏನಿತ್ತೋ ಜರೂರತ್ತು
ಸೀರೆಯುಟ್ಟು ವೇಷ ಕಟ್ಟುವುದು;
ಜೀವನೋಪಾಯಕ್ಕೇನೆಂದು ಸೀರೆಯುಟ್ಟವಳು ಅವಳು.

ಪುಟ್ಟ ಗೌರಿ ಹೇಳಿದ್ದು "ಸೀರೆ ನೋಡಿ ಮರುಳಾಗಬೇಡಿ; ಬೇರೆ ಬಟ್ಟೆಯುಟ್ಟು ಜೀವನವ ಉಸಿರಾಡಿ!"

ಶುಕ್ರವಾರ, ಮಾರ್ಚ್ 16, 2018

ಸೀತೆ

ಆದರೂ ಪ್ರೀತಿ ಬದಲಾಗಲಿಲ್ಲ!

ಹೊತ್ತೊಯ್ದ ರಾವಣ
ಭಾವನೆಗಳ ಮೇಲೆ ಹತ್ತಿ ಕುಣಿದರೂ,
ಸೀತೆ ಬದಲಾಗಲಿಲ್ಲ!

ಕತ್ತಲ ಕೂಪಕ್ಕೆ ನೂಕಿದರೂ,
ಬೆತ್ತಲಾಗಿಸಿ ಬಿಸಿಲಿಗೆ ನೂಕಿದರೂ,
ದೇಹವೂ, ಆತ್ಮವೂ ಕೊಳೆಯಾಗಲಿಲ್ಲ.

ಮುಗಿಯದ ಸಮಯವನ್ನು ಮುಗಿಸಲಾಗಿ
ಕಡಿಲಿನೆಡೆಗೆ ಸಾಯಲು ಹೆಜ್ಜೆಹಾಕುವಾಗ
ಕೇಳಿಸಿದೆ ದಡದ ದನಿ- " ನಾನೂ ತೆರೆಗಳಿಗಾಗಿ ಕಾಯುತ್ತಿಲ್ಲವೇ?!"

ಅಶೋಕ ವನದಲ್ಲಿ ಹೂವೇ ಅರುಳುತ್ತಿಲ್ಲವೆಂದರು
ಸೇವಕೀಯರು;
ರಾಮನ ಪ್ರೇಮ ರಾವಣನ ಬಂಧಿಯಾಗಿರುವಲ್ಲಿ
ಹೂವುಗಳಿಗೇನು ಕೆಲಸ?

ಊಟ ಬಿಟ್ಟರೆ ಅನ್ನಕ್ಕೆ ಅಪಮಾನ,
ಹಠ ಬಿಟ್ಟರೆ ತನ್ನತನಕ್ಕೆ ಅಪಮಾನ,
ಉಂಡು ತೇಗಿದ್ದು
ರಾವಣನಿಗೆ ಕೇಳಿಸಿತೆಂಬ ಭಯ.

ಇಷ್ಟವಿಲ್ಲದ ದೇಶದಲ್ಲಿ
ಇನ್ನೆಷ್ಟು ದಿನ ಈ ಕಷ್ಟ?
ಪ್ರೀತಿಗೆ ಗುರುತ್ವ ಶಕ್ತಿ ಇಲ್ಲವೇ?!!!

ರಾಮನ ಪ್ರೇಮದ ನಿಮಿತ್ತ
ರವಣನೊಡನೆ ನಿತ್ಯ ಸಮರ ಸಾರಿ ಗೆದ್ದವಳು ಸೀತೆ;
ರಾಮ ನಿಮಿತ್ತ ಮಾತ್ರ!!