ಗುರುವಾರ, ಅಕ್ಟೋಬರ್ 31, 2019

ವೃತ್ತದೊಳಗಿನ ಬೇರೆ ಬೇರೆ ಪರಿಧಿಗಳಲ್ಲಿ
ಸುತ್ತುತ್ತಿದ್ದೇವೆ ನಾವು
ಒಂದೇ ರಸ್ತೆಯ ಬೇರೆ ಬೇರೆ ಬದಿಗಳಲ್ಲಿ
ಒಂದೇ ನೀರಿನ ಬೇರೆ ಬೇರೆ ಹನಿಗಳಲ್ಲಿ
ನಾನು ಒಂಟಿಯಾಗಿ
ನೀನೂ ಒಂಟಿಯಾಗಿ
ತೊಡಕಿಲ್ಲದೆ ಜರುಗುವ
ಸಮಾರಂಭದಂತೆ
ನಾವು ನಮ್ಮ ಕಕ್ಷೆಗಳಲ್ಲೇ
ಕಳೆದುಹೋಗಿದ್ದೇವೆ.

ಈ ಊರಿನ ಬೇರೆಬೇರೆ ಗಲ್ಲಿಗಳನ್ನು
ಬೇರೆಬೇರೆ ಸಮಯಗಳಲ್ಲಿ ಸುತ್ತಿ
ಸುಸ್ತಾಗಿದ್ದೇವೆ
ನಾನು ಒಂಟಿಯಾಗಿ
ನೀನೂ ಕೂಡ ಒಂಟಿಯಾಗಿ
ಯಾವುದೋ ಮುಳ್ಳು ಬೇಲಿ
ಬದಿಯ ನೀಲಿ ಹೂವು ಕಂಡು
ಬೆರಗಾದಗಿದ್ದು ಕೂಡ
ಬೇರೆ ಬೇರೆ ಸಮಯದಲ್ಲೇ.

ಮುಗಿದುಹೋದ ಹಗಲಿನ ಕತ್ತಲಲ್ಲಿ
ನಡೆಯುವಾಗ ಎಡವಿ ಬಿದ್ದು
ಒಬ್ಬರಿಗೊಬ್ಬರು ಕೈಹಿಡಿದು
ಎಬ್ಬಿಸಿ ಸಂತೈಸಿ ಮಾತನಾಡಿಯೂ ಸಹ
ಬೇರೆಬೇರೆಯಾಗಿಯೇ ಉಳಿಯುತ್ತೇವೆ;
ಕತ್ತಲಿಗೇನುಗೊತ್ತು
ನಾವು ಒಬ್ಬರಿಗೊಬ್ಬರು ಮೋಹಿಸುವುದು
ನಮ್ಮ ಅಜ್ಞಾತ ಪ್ರೇಮವೂ
ನಮ್ಮನ್ನು ಕೂಡಿಸುವುದಿಲ್ಲ.


ಗುರುವಾರ, ಅಕ್ಟೋಬರ್ 24, 2019

ನನ್ನನ್ನೇ ನಾನು ತಳ್ಳಿಕೊಳ್ಳುವ ಆಳದಲ್ಲಿ
ನಿನ್ನ ಕಳೇಬರದ ಕುರುಹುಗಳಿವೆ.

ನಾನಾಗಿಯೇ ಸಿಕ್ಕಿಹಾಕಿಕೊಳ್ಳುವ
ಹೊರಬರಲಾಗದ ಇಕ್ಕಟ್ಟಿನಲ್ಲಿ
ನಿನ್ನ ಕೊನೆಯ ಉಸಿರಿನ ಪರಿಮಳ
ನನ್ನನ್ನು ಪೀಡಿಸುತ್ತದೆ.

ನೀನು ಇಲ್ಲದಿರುವುದಕ್ಕೆ
ಸಾಕ್ಷಿ ಎಂಬಂತೆ ನಾನು ಅಳುತ್ತಿರುತ್ತೇನೆ.

ನಿನ್ನ ಮರಣಪತ್ರದಲ್ಲಿ
ನನ್ನ ಹೆಸರೂ ಸೇರಿಸಿಕೊಳ್ಳಬೇಕೆನಿಸುತ್ತದೆ
ನನಗೆ ನಾನೇ ಸಾವನ್ನು ಬರೆದುಕೊಳ್ಳುತ್ತೇನೆ
ಮತ್ತೆ ಮತ್ತೆ ನನ್ನನ್ನು ನಾನೇ ತಳ್ಳಿಕೊಳ್ಳುತ್ತೇನೆ.

ಮತ್ತೆ ಮತ್ತೆ ಮೃತ್ಯುವಿನ ಕೈಹಿಡಿದು
ನನ್ನನ್ನು ಜೀವದ ಜೋಳಿಗೆಯಲ್ಲಿ
ಬಿಟ್ಟುಹೋಗುವ ಆಟದಲ್ಲಿ
ನಿನ್ನ ಕೈವಾಡವಿರಲಿಕ್ಕಿಲ್ಲ.

ನಾನು ಬದುಕಿರುವಷ್ಟು ದಿನವೂ
ನಿನ್ನ ನೆನಪೂ ಬದುಕಿರುತ್ತದೆ.


ಶುಕ್ರವಾರ, ಅಕ್ಟೋಬರ್ 18, 2019

ಪರಿಮಳದ ನಕಾಶೆ

ಪರಿಮಳದ ನಕಾಶೆಯ ಬಿಂದುವೊಂದರಲ್ಲಿ
ನಿಂತು ನಗುತ್ತಿದ್ದಾನೆ ಹುಡುಗ
ನನ್ನ ಹುಡುಕಾಟದ ಹತಾಶೆಯ ಕಂಡು.

ಆ ದಾರಿ ಈ ದಾರಿ ಎಂದು ನಾನು
ಮೂಗು ಅರಳಿಸಿಕೊಂಡು
ಚಲಿಸಿ ಚಲಿಸಿ ಸೋತು
ತಲುಪಲಾಗದ ಸ್ಥಳಗಳನ್ನೆಲ್ಲ
ಪಿಂಡಿ ಕಟ್ಟಿ ಒಗೆದರೆ ಹಿಡಿದುಕೊಳ್ಳುತ್ತಾನೆ
ಅವನು ಬಂದು.

ಪ್ರತೀ ಹಾದಿಯ ಪರಿಮಳವನ್ನೂ
ಅಳೆದು ರಚಿಸಿದ ನಕಾಶೆಯ
ಅವನು ಅಲ್ಲಗಳೆಯುತ್ತಾನೆ;
ಬೇಸತ್ತು ನಿಟ್ಟುಸಿರಿಟ್ಟು
ಅವನು ಕದಡುವ ಗಾಳಿ
ನಕಾಶೆಯ ಅಸ್ತಿತ್ವವನ್ನು ಹಾಳುಮಾಡುತ್ತದೆ.

ನಾನು ಸದಾ ಹುಡುಕುವ ಅವನೂ
ಒಂದು ಪರಿಮಳವೇ ಆಗಿದ್ದಾನೆ.

ನಕಾಶೆಯ ಒಂದೇ ಬಿಂದುವಿನಲ್ಲಿ
ಅವನನ್ನು ಹಿಡಿದಿಡಲಾಗುವುದಿಲ್ಲ;
ಬಿಡದೇ ಹುಡುಕುತ್ತಿರಬೇಕು
ಅವನ ಬಿಡರಾವನ್ನು
ಅವನನ್ನು ಹುಡುಕದೇ ಇರಲಾಗುವುದಿಲ್ಲ.






ಸೋಮವಾರ, ಆಗಸ್ಟ್ 13, 2018

ನಾನ್ಯಾರು ಗುರುದೇವ

ನಾನ್ಯಾರು ನಾನ್ಯಾರು ನಾನ್ಯಾರು ಗುರುದೇವ!

ಶಿವನಂತ ಓಂಕಾರ
ಒಳಗೊಳಗೇ ಮೊರೆಯುತಿದೆ

ಕಡಲಂತ ನದಿಯೊಂದು
ನನ್ನೊಳಗೂ ಹರಿಯುತಿದೆ

ನಾನ್ಯಾರು ನಾನ್ಯಾರು ನಾನ್ಯಾರು ಗುರುದೇವ

ವಿಷ ಕುಡಿದ ಮೇಲೆಯೂ
ತಿಳಿಯಾಗಿ ನಗುತಿರುವೆ

ಯಾರದ್ದೋ ಕಣ್ಣೀರು
ನಾನಾಗಿ ಹರಿದಿರುವೆ

ನಾನ್ಯಾರು ನಾನ್ಯಾರು ನಾನ್ಯಾರು ಗುರುದೇವ

ಹಣ್ಣೊಳಗೆ ಹೂವಾಗಿ
ಚಿಗುರಾಗಿ ಬೇರ್ಬಿಟ್ಟಿರುವೆ

ಆಕಾಶವ ತೆರೆದಿಟ್ಟು
ನೆಲದಿಂದ ಬೇರ್ಪಟ್ಟಿರುವೆ

( ಇನ್ನೂ ಕೇಳುವುದಿದೆ .........

ಮಂಗಳವಾರ, ಜುಲೈ 31, 2018

ಹೆಣದ ವಾಸನೆ ( ಕಥೆ)

ನಾವು ರಾಜಾಜಿನಗರದಲ್ಲಿದ್ದಾಗ ಪಕ್ಕದ ಮನೆಯಲ್ಲಿ ಕೋಲಾರ ಮೂಲದ ಸಂಸಾರವೊಂದು ವಾಸವಾಗಿತ್ತು. ಯಾವುದೊ ಆಸ್ತಿಯ ಸಲುವಾಗಿ ತಂದೆ ಮತ್ತು ಮಗನ ಮಧ್ಯೆ ಆಗಾಗ ಜಗಳಗಳು ನಡೆಯುತ್ತಿರುವುದು ನಮಗೆ ಕಿಟಕಿಯ ಮೂಲಕ ಕೇಳಿಸುತ್ತಿರುತ್ತಿತ್ತು. ಜಾಸ್ತಿ ಜಗಳ ನಡೆದಾಗಲೆಲ್ಲ ಆ 60 ವರ್ಷ ವಯಸ್ಸಿನ ತಂದೆ ಬಸ್ ಹತ್ತಿಕೊಂಡು ಕೊಲಾರಕ್ಕೆ ಹೋಗಿಬಿಡುತ್ತಿದ್ದ. ಅದು ಹೇಗೋ ಏನೋ ಆರೋಗ್ಯವನ್ನು ಹದಗೆಡಿಸಿಕೊಂಡು ಬರುತ್ತಿದ್ದ. ತಿರುಗಿ ಬಂದ ಸ್ವಲ್ಪ ದಿನಗಳಲ್ಲೇ ಆಂಬುಲೆನ್ಸ್ ಬಂದು ಅವನನ್ನು ಹೇರಿಕೊಂಡು ಹೋಗುತ್ತಿತ್ತು. ಮತ್ತೆ 15-20 ದಿನ ಆಸ್ಪತ್ರೆಯಲ್ಲೇ ಕಳೆದು ಸ್ವಲ್ಪ ಗೆಲುವಾಗಿ ಬರುತ್ತಿದ್ದ. ಅವನು ಮನೆಗೆ ಬರುತ್ತಿದ್ದಂತೆಯೇ ಹೆಂಡತಿ ಮತ್ತು ಮಗ ಅವನಿಗೆ ಬಯ್ಯಲು ಪ್ರಾರಂಭಿಸುತ್ತಿದ್ದರು - "ಆಸ್ಪತ್ರೆಯಲ್ಲೇ ಇರಬೇಕಿತ್ತು ಆರಾಮಾಗಿ ನರ್ಸ್ ಜೊತೆಗೆ.... ವರ್ಷಕ್ಕೆ ಮೂರ್ ಸಲ ಆಸ್ಪತ್ರೆ ಸೇರ್ತಿಯ. ಪ್ರತೀ ಸಲಾನೂ ಎರಡೆರಡು ಲಕ್ಷ ನುಂಗಿ ಹಾಕ್ತಿಯ. ಅಸ್ತಿ ಪತ್ರಕ್ಕೆ ಸಹಿ ಹಾಕಾದ್ರೂ ಸಾಯಿ!" ಮತ್ತೆ ಅವರ ಮನೆಯಲ್ಲಿ ಮಾತಿನ ಚಕಮಕಿಗಳು ಬೆಂಕಿಯನ್ನು ಎಬ್ಬಿಸುತ್ತಿದ್ದವು.

ಒಂದು ಶನಿವಾರ ಬೆಳಿಗ್ಗೆ ಆ ಮನೆ ಮಂದಿಯೆಲ್ಲರೂ ಕಾರು ಹತ್ತಿಕೊಂಡು ಎಲ್ಲಿಗೋ ಹೋದರು, ಆ ಮುದುಕನೊಬ್ಬನನ್ನೇ ಮನೆಯಲ್ಲಿ ಬಿಟ್ಟು.
ಮಳೆಗಾಲದ ಥಂಡಿಗೆ ಆ  ವಾರವೆಲ್ಲ ಅವನಿಗಂತೂ ಕೆಮ್ಮು ಜಾಸ್ತಿಯೇ ಇತ್ತು. ನಮ್ಮ ಮನೆಯೊಳಗೇ ಯಾರೋ ಕೆಮ್ಮುತ್ತಿದ್ದಾರೋ ಎನ್ನುವಷ್ಟು ಜೋರಾಗಿ ಕೇಳಿಸುತ್ತಿತ್ತು ಆ ಕೆಮ್ಮು. ಆ ದಿನ ಸಂಜೆ ಅವನು ವಾಕಿಂಗ್ ಹೋಗಿದ್ದನ್ನು ನೋಡಿದೆವು. ತಿರುಗಿ ಬಂದದ್ದನ್ನೂ ನೋಡಿದೆವು. ಹೊರಗೆ ಹೋದ ಹೆಂಡತಿ, ಮಗ, ಸೊಸೆ ಯಾರೂ ರಾತ್ರಿಯಾದರೂ ಬರಲಿಲ್ಲ. ರಾತ್ರಿಯೆಲ್ಲಾ ಅವನ ಕೆಮ್ಮು ನಮ್ಮನ್ನು ಆಗಾಗ ಎಚ್ಚರಿಸುತ್ತಿತ್ತು.

ಭಾನುವಾರ ನಾವು ಪಿಕ್ನಿಕ್ ಗೆ ಹೋಗಿ ಸಂಜೆ ಬರುವಷ್ಟರಲ್ಲಿ ಆ ಮುದುಕನ ಕೆಮ್ಮು ಇರಲಿಲ್ಲ. ವಾಕಿಂಗ್ ಹೋಗಿರಬಹುದು ಎಂದುಕೊಂಡೆವು. ರಾತ್ರಿಯಾದರೂ ಆ ಮನೆಯಲ್ಲಿ ಯಾರ ಸುಳಿವೂ ಇಲ್ಲ. ಅವನಿಗೇನೋ ಆಗಿದೆ ಎಂದೆನ್ನಿಸಿತು. ಪತಿಯಲ್ಲಿ ಹೇಳಿದಾಗ, " ಅವನನ್ನು ಯಾರೂ ಪ್ರೀತಿಯಿಂದ ಕಾಣುತ್ತಿರಲಿಲ್ಲ. ಸಾಯಲೆಂದೇ ಒಂಟಿಯಾಗಿ ಬಿಟ್ಟುಹೋಗಿರಬಹುದು" ಎಂದರು. ಸೋಮವಾರ ಬೆಳಿಗ್ಗೆ ನನ್ನ ಪತಿ ಹೋಗಿ ಅವರ ಮನೆಯ ಬೆಲ್ ನ್ನು ಹಲವು ಬಾರಿ ಬಾರಿಸಿದರೂ ಯಾರೂ ಬಾಗಿಲು ತೆಗೆಯಲಿಲ್ಲ. ಈಗಿನ ಕಾಲದಲ್ಲಿ ಬಾಗಿಲು ಒಳಗಿನಿಂದ ಲೋಕ್ ಆಗಿದೆಯೋ ಅಥವಾ ಹೊರಗಿನಿಂದ ಲೋಕ್ ಆಗಿದೆಯೋ ಗೊತ್ತಾಗುವುದೇ ಇಲ್ಲ. ಕಿಟಕಿಯಿಂದಲೂ ಏನೂ ಕಾಣಿಸಲಿಲ್ಲ. ಅವರ ಮನೆಯ ಫೋನ್ ನಂಬರ್ ನಮ್ಮಲ್ಲಿ ಇರಲಿಲ್ಲ. ಏನು ಮಾಡುವುದೋ ತಿಳಿಯದೆ ಸುಮ್ಮನಾದೆವು. ಆ ಮನೆಗೆ ಮಂಗಳವಾರವೂ ಯಾರೂ ವಾಪಸಾಗಲಿಲ್ಲ. ಅವನೇನಾದರೂ ಸತ್ತಿದ್ದರೆ ಹೆಣದ ವಾಸನೆ ಬರಬೇಕಿತ್ತಲ್ಲ ಇಷ್ಟೊತ್ತಿಗೆ ಎಂಬ ಯೋಚನೆಯೊಂದೂ ಬಂತು.

ಬುಧವಾರ ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ಆ ಮನೆಯ ಮುಂದೆ ಕಾರು ಬಂದು ನಿಂತಿತು. ಆ ಮುದುಕನ ಹೆಂಡತಿ ಕಾರನ್ನು ಇಳಿಯುವುದನ್ನು ನೋಡಿದೆವು. ಹಣೆಯಲ್ಲಿ ಕುಂಕುಮ ಇರಲಿಲ್ಲ; ಕೂದಲನ್ನು ನಾಜೂಕಾಗಿ ಬಾಚಿರಲಿಲ್ಲ. ಮುದುಕ ಸತ್ತು, ಭಾನುವಾರ ನಾವು ಪಿಕ್ನಿಕ್ ಹೋದ ಸಮಯದಲ್ಲಿ ಅವನ ಹೆಣವನ್ನು ಒಯ್ದಿರಬೇಕು ಎಂದುಕೊಂಡೆವು.
ವಿಧವೆ ಹೆಂಗಸಿನ ಬಗ್ಗೆ ಕನಿಕರವೆನಿಸಿತು.

ಆ ಮನೆಯಿಂದ ಮಾತುಗಳು ಕೇಳಿಸಿದವು. ಅವನ ಹೆಂಡತಿ ಹೇಳುತ್ತಿದ್ದಳು- " ಈ ಮನ್ಶ, ಕೆಮ್ಮು ಜೋರ್ ಆಯ್ತು ಹೇಳಿ ಆಸ್ಪತ್ರೆಗೆ ಹೋಗಿ ಅಡ್ಮಿಟ್ ಆಗಿದ್ದಾನೆ. ಹಿಂಗೇ ಪದೇ ಪದೇ ಆಸ್ಪತ್ರೆಗೆ ಖರ್ಚು ಮಾಡಿ, ಅವನ ಆಸ್ತಿಗಿಂತ ಜಾಸ್ತಿನೇ ದುಡ್ಡು ನುಂಗಿ ಹಾಕ್ತಾನೆ. ಈ ಸಲನಾದ್ರೂ ಅವನು ಅಲ್ಲೇ ನೆಗದ್ ಬಿದ್ ಹೋಗಿದ್ರೆ ಸಾಕಾಗಿತ್ತು!"

ಸೋಮವಾರ, ಜೂನ್ 11, 2018

ನೂಡಲ್ಸ್ ಮಮ್ಮಿ- ಬರ್ಗರ್ ಡ್ಯಾಡಿ! (ಕಥೆ)

"ಮಮ್ಮೀ, ನಾಳೆ ಸ್ಕೂಲಲ್ಲಿ ಪಿಕ್ನಿಕ್ ಗೆ ಕರ್ಕೊಂಡು ಹೋಗ್ತಾ ಇದಾರೆ. ಎಲ್ರೂ ಲಂಚ್ ನ್ನು ಮನೆಯಿಂದಾನೇ ತೊಗೊಂಡು ಬರೋದು ಅಂತ ಡಿಸೈಡ್ ಆಗಿದೆ. ಲಂಚ್ ಬಾಕ್ಸ್ ಗೆ ಏನಾದ್ರೂ ಮಾಡಿ ಕೊಡ್ತಿಯಾ?" ಹತ್ತು ವರ್ಷದ ಹುಡುಗ  ಆಗ್ನೇಯ ತನ್ನ ಅಮ್ಮನನ್ನು ಕೇಳಿದ.
"ಬೇಬಿ, ನಿಂಗೆ ಗೊತ್ತಲ್ವಾ, ನಂದು ಅರ್ಲಿ ಮಾರ್ನಿಂಗ್ ಶಿಫ್ಟ್ ಅಂತಾ! ಡ್ಯಾಡಿಗೆ ಹೇಳು ನೂಡಲ್ಸ್ ಮಾಡಿ ಕೊಡ್ತಾರೆ." ಅಮ್ಮನ ಉತ್ತರ ಆಗ್ನೇಯನ ಮುಖವನ್ನು ಸಪ್ಪಗಾಗಿಸಿತು.

ಅಪ್ಪ ಕೆಲಸ ಮುಗಿಸಿ ಮನೆಗೆ ಬರುವುದು ರಾತ್ರಿ- ಸುಮಾರು 12 ಗಂಟೆಯ ಮೇಲೇ. ಅಪ್ಪ ಬರುವವರೆಗೆ ಕಾಯುತ್ತ ಕುಳಿತ.

12.30ಕ್ಕೆ ಬಂದ ಅಪ್ಪನನ್ನು ಕೇಳಿದಾಗ ಸಿಕ್ಕ ಉತ್ತರ ಆಗ್ನೇಯನನ್ನು ಸ್ವಲ್ಪವಾದರೂ ಖುಷಿಪಡಿಸಿತ್ತು. ಅಪ್ಪ ಹೇಳಿದ್ದಿಷ್ಟು-" ಕಿಡೂ, ನಂಗೆ ನೂಡಲ್ಸ್ ಮಾಡಕೆ ಬಾರಲ್ಲಾ. ಬರ್ಗರೋ, ಸ್ಯಾಂಡ್ವಿಚ್ಚೊ ಮಾಡಿ ಕೊಡ್ತೀನಿ. ಓಕೆ!"

ಬೆಳಗ್ಗೆ 8 ಗಂಟೆಗೆ ಎದ್ದು ಸ್ನಾನ ಮಾಡಿ ರೆಡಿಯಾಗಿ, ಕೋರ್ನ ಫ್ಲೇಕ್ಸ್ ಗೆ ಹಾಲು ಸುರಿದುಕೊಂಡು ತಿಂದು ಮುಗಿಸಿದ ಆಗ್ನೇಯ ಅಪ್ಪನನ್ನು ಎಬ್ಬಿಸಲು ಪ್ರಯತ್ನಿಸಿದ. ಹಿಂದಿನ ದಿನ ಮಾಡಿದ ಪ್ರಾಮಿಸ್ ನ್ನು ನೆನಪಿಸಿದ.
"ನನ್ನ ಪರ್ಸಿನಿಂದ ಎಷ್ಟು ಬೇಕೋ ಅಷ್ಟು ದುಡ್ಡು ತೊಗೊಂಡು ಹೋಗು. ಅಲ್ಲೇ ಏನಾದ್ರೂ ತೊಗೊಂಡು ತಿನ್ನು. ನಿದ್ದೆ ಹಾಳು ಮಾಡಬೇಡ. ಪ್ಲೀಸ್" ಎಂದ ಅಪ್ಪ.
ಆಗ್ನೇಯನಿಗೆ ಚಿಂತೆ ಶುರುವಾಯಿತು - ಗೆಳೆಯರೆಲ್ಲ ಮನೆಯಿಂದಲೇ ಲಂಚ್ ಬಾಕ್ಸ್ ತಂದಿರುತ್ತಾರೆ. ತಾನು ಮಾತ್ರ ಅಲ್ಲೇ ಏನೋ ಕೊಂಡು ತಿನ್ನುವುದು ಹೇಗೆ? ತನ್ನನ್ನು ನೋಡಿ ಗೆಳೆಯರೆಲ್ಲ ಅಪಹಾಸ್ಯ ಮಾಡಿದರೆ?!

ಅಷ್ಟೊತ್ತಿಗೆ ಕೆಲಸದಾಕೆ ಬಂದಳು. ಏನಾದರೂ ತಿಂಡಿ ಮಾಡಿಕೊಡೆಂದು ಆಗ್ನೇಯ ಅವಳಿಗೇ ಗಂಟುಬಿದ್ದ. ಆಗಲೇ ಗಂಟೆ ಒಂಬತ್ತಾಗಿದೆ, ಇನ್ನರ್ಧ ಗಂಟೆಯಲ್ಲಿ ಪಿಕ್ನಿಕ್ ಬಸ್ ಬಂದೇ ಬಿಡುತ್ತದೆ. ಥಟ್ಟನೆ ಏನು ಮಾಡುವುದೆಂದು ಯೋಚಿಸುತ್ತಿದ್ದ ಕೆಲಸದಾಕೆಗೆ ನೂಡಲ್ಸ್ ಆದರೂ ಮಾಡಿಕೊಡು ಎಂದ. ಹತ್ತು ನಿಮಿಷದಲ್ಲಿ ನೂಡಲ್ಸ್ ತಯಾರಿಸಿ ಬಾಕ್ಸ್ ಗೆ ತುಂಬಿಸಿ ಕೊಟ್ಟು, ಅವಳು ಮನೆಕೆಲಸವನ್ನು ಪ್ರಾರಂಭಿಸಿದಳು.

ಪಿಕ್ನಿಕ್ ಗೆ ಬಂದವರು ಝುದಲ್ಲಿನ ಪ್ರಾಣಿಗಳನ್ನೊಂದಿಷ್ಟು ನೋಡಿದರು. ಮಧ್ಯಾಹ್ನ ಊಟದ ಸಮಯವಾಯಿತು.

ಒಂದು ಕಡೆ ಮರದ ನೆರಳಿನಲ್ಲಿ ಕುಳಿತು, ಎಲ್ಲರೂ ಬಾಕ್ಸ್ ತೆರೆಯಲು ಪ್ರಾರಂಭಿಸಿದರು. ಆಗ್ನೇಯನಿಗೆ ಮುಜುಗರ - ತಾನು ತಂದಿರುವುದು ನೂಡಲ್ಸ್, ಯಾರಾದರೂ ನೋಡಿದರೆ ನಗುತ್ತಾರೇನೋ ಎಂಬ ಭಯ.
ಹೀಗಾಗಿ ಗುಂಪಿನ ತುದಿಯಲ್ಲೆಲ್ಲಾದರೂ ಕುಳಿತುಕೊಳ್ಳೋಣ ಎಂದು ಜಾಗ ಹುಡುಕುತ್ತಿರುವಾಗ, ಈಗಾಗಲೇ ತಿನ್ನಲು ಪ್ರಾರಂಭಿಸಿದವರ ಬಾಕ್ಸ್ ಗಳಲ್ಲೂ ನೂಡಲ್ಸ್ ಮತ್ತು ಬರ್ಗರ್/ಸ್ಯಾಂಡ್ವಿಚ್ ಗಳೇ ಕಾಣಿಸಿದವು. ಸ್ತಬ್ಧನಾಗಿ ನಿಂತ ಆಗ್ನೇಯನಿಗೆ ಮತ್ತೊಂದಿಷ್ಟು ನೂಡಲ್ಸ್ ಮತ್ತು ಬರ್ಗರ್ ಬಾಕ್ಸ್ ಗಳು ತೆರೆದುಕೊಳ್ಳುತ್ತಿರುವುದು ಕಾಣಿಸಿತು. ಎಲ್ಲರೂ ಕೆಲಸದಾಕೆ ಮಾಡಿದ ನೂಡಲ್ಸ್/ ಬರ್ಗರ್ ನ್ನೇ ತಂದಿದ್ದಾರೆನೋ ಎಂದುಕೊಂಡಿತು ಆಗ್ನೇಯನ ಮುಗ್ಧ ಮನಸ್ಸು!

ಕಥೆಗೆ ಕಾರಣವೇನು?
ಬನ್ನೇರುಘಟ್ಟ ನ್ಯಾಷನಲ್ ಪಾರ್ಕಿನಲ್ಲಿ ನೋಡಿದ ಘಟನೆ- 18-20 ಮಕ್ಕಳು ಲಂಚ್ ಬಾಕ್ಸ್ ತೆರೆದು ಸಾಲಾಗಿ ಕಟ್ಟೆಯ ಮೇಲೆ ಕುಳಿತಿದ್ದಾರೆ. ನಾನು ಪ್ರತೀ ಬಾಕ್ಸ್ ನ್ನು ನೋಡುತ್ತಾ ಹೋದೆ. ನೂಡಲ್ಸ್ ಮತ್ತು ಸ್ಯಾಂಡ್ವಿಚ್ ಬಿಟ್ಟು ಮತ್ತೇನೂ ಕಾಣಿಸಲಿಲ್ಲ.

ಬುಧವಾರ, ಮೇ 30, 2018

ಬಡವನ ಉದ್ಧಾರವೂ ಆದೀತೇನೋ!

ಬೆಂಗಳೂರಿನ ರೆಸಿಡೆನ್ಷಿಯಲ್ ಏರಿಯಾದ ರಸ್ತೆಯ ಬದಿಯಲ್ಲೊಂದು ಟ್ಯಾಕ್ಸಿ ನಿಂತಿತ್ತು. ಪೂರ್ತಿ ಕೆಂಪು ಗುಲಾಬಿಯಿಂದಲೇ ಮಾಡಿದ ದೊಡ್ಡದೊಂದು ಮಾಲೆಯನ್ನು ಟ್ಯಾಕ್ಸಿಗೆ ಹಾಕಿದ್ದರು. ಹೆಬ್ಬಾವಿನ ಗಾತ್ರದ ಮಾಲೆ. ಅಷ್ಟೊಂದು ದೊಡ್ಡ ಮಾಲೆಯನ್ನು ನಾನು  ಯಾವತ್ತೂ ಮುಟ್ಟಿ ನೋಡಿದ್ದೂ ಇಲ್ಲ, ಹತ್ತಿರದಿಂದ ನೋಡಿದ್ದೂ ಇಲ್ಲ.
ಮಾಲೆಯನ್ನು ನೋಡಿಯಾದ ಮೇಲೆ ಟ್ಯಾಕ್ಸಿ ಡ್ರೈವರ್ ನನ್ನು ಮಾತನಾಡಿಸಿದೆವು.  ಅವನ ಅಣ್ಣನ ಗೆಳೆಯ ತಾಲೂಕ ಪಂಚಾಯತ್ ಅಧ್ಯಕ್ಷನೆಂದೂ, ಅವನ ಸನ್ಮಾನಕ್ಕೆಂದು ಯಾರೋ ತಂದ ಮಾಲೆ ಅದೆಂದೂ ತಿಳಿಯಿತು. ಮಾಲೆಯ ಬೆಲೆ 10,000 ರೂಪಾಯಿಗಳೆಂದೂ ತಿಳಿಯಿತು.

ಇವಿಷ್ಟು ನಡೆಯುತ್ತಿರುವಾಗ ಪಕ್ಕದ ಗಾರೆ ಕೆಲಸದವರ ಶೆಡ್ ನಿಂದ ಕೇಳಿಬಂದ ಮಾತು ಹೀಗಿತ್ತು-
ಹೆಂಗಸು -" ನಮಗೇ ಸರಿಯಾಗಿ ಉಣ್ಣಾಕೆ ಇಲ್ಲ, ಇನ್ನು ಈ ಮಕ್ಳು ಹಸ್ದು ಅಳದು ನೋಡಕೆ ಹಿಂಸೆ."
ಗಂಡಸು- "ಹುಟ್ಸಿದ್ ದೇವರು ಹುಲ್ಲು ಮೇಯ್ಸಕಿಲ್ವಾ?"
ಹೆಂಗಸು - " ಮೇಯಾಕೆ ಹುಲ್ಲಾದ್ರೂ ಎಲ್ಲಯ್ತಿ ಈ ಊರಲ್ಲಿ? ದಿನಾ..."
ಮುಂದೆನೋ ಹೇಳುವವಳಿದ್ದಳು, ಆದರೆ ಅಷ್ಟರಲ್ಲಿ ಮಕ್ಕಳ ಗಲಾಟೆ ಶುರುವಾಯಿತು.

ಪುಟ್ಟ ಮಗುವೊಂದು ಪುಟ್ಟ ಪಾತ್ರೆಯನ್ನು ಕೈಲಿ ಹಿಡಿದುಕೊಂಡು ರಸ್ತೆಗೆ ಓಡಿಬಂತು. ಹಿಂದೆಯೇ ಇನ್ನಿಬ್ಬರು ಪುಟ್ಟ ಪುಟ್ಟ ಮಕ್ಕಳು ಬಂದರು. ಪಕ್ಕದಲ್ಲೇ ಇದ್ದ ಜಲ್ಲಿ ರಾಶಿಯ ಮೇಲೆ ಕುಳಿತು ಪಾತ್ರೆಯಲ್ಲಿದ್ದ ಅವಲಕ್ಕಿಯನ್ನು ತಿನ್ನಲಾರಂಭಿಸಿದರು.
ನಾನೂ, ನನ್ನ ಪತಿಯೂ ಇತ್ತ ಟ್ಯಾಕ್ಸಿ ಡ್ರೈವರ್ ನೂಡನೆ ಮಾತನಾಡುತ್ತಲೇ ಇದ್ದೇವೆ, ಅತ್ತ ನಮ್ಮ 2 ವರ್ಷದ ಮಗಳು ಆ ಮಕ್ಕಳ ಬಳಿ ಹೋಗಿ ಕುಳಿತಿದ್ದಾಳೆ. ಆ ಮಕ್ಕಳು ಇವಳಿಗೆ ಒಂದು ತುತ್ತನ್ನೂ ಹಾಕಿ ಆಗಿದೆ.

ಅಂದುಕೊಂಡೆ- ಬಡವನ ಮನೆಯ ಊಟ ಚಂದ, ದೊಡ್ಡವನ ಮನೆಯ ನೋಟ ಚಂದ.


ನಿಧಾನವಾಗಿ ಯೋಚಿಸಿದಾಗ ಅನ್ನಿಸಿದ್ದು- 10 ಸಾವಿರ ರೂಪಾಯಿಯ ಮಾಲೆಯನ್ನು ಕಟ್ಟಲು ಅದೆಷ್ಟು ಜನ ಶ್ರಮ ಪಟ್ಟಿದ್ದಾರೋ- ಹೂವಿನ ಗಿಡ ಬೆಳೆಸುವುದರಿಂದ ಹಿಡಿದು, ಮಾಲೆಯನ್ನು ಕಟ್ಟಿ ಸನ್ಮಾನ ಸಮಾರಂಭಕ್ಕೆ ತಲುಪಿಸಿದವರ ವರೆಗೆ ಎಲ್ಲರಿಗೂ ಅವರವರ ಕೂಲಿ ಸಂದಾಯವಾಗಿದೆ.

ಶ್ರೀಮಂತರನ್ನು ಹೆಚ್ಚು ಹೆಚ್ಚು ಖರ್ಚು ಮಾಡಲು ಪ್ರಾತ್ಸಾಹಿಸಿದರೆ ಬಡವನ ಉದ್ಧಾರವೂ ಆದೀತೇನೋ!