ಶುಕ್ರವಾರ, ಮೇ 11, 2018

ತೀರದ ಸಾಲ (90ರ ದಶಕದ ಕಥೆ)

ಶಾಲೆಯ ಎದುರು ಐಸ್ ಕ್ಯಾಂಡಿವಾಲಾ ಬಂದಾಗಲೆಲ್ಲ ಅದನ್ನು ತಿನ್ನುವ ಆಸೆ ರೇವತಿಗೆ ಆಗುತ್ತಿದ್ದುದು ಸಹಜವಾಗಿದ್ದೇ ಆದರೂ, ಆ ದಿನ ಯಾಕೋ ದೊಡ್ಡ ಶಾಸ್ತ್ರಿಗಳ ಮಗಳು ಶಿಲ್ಪಾಳಿಂದ 50 ಪೈಸೆ ಸಾಲ ಪಡೆದು ಒಂದು ಐಸ್ ಕ್ಯಾಂಡಿಯನ್ನು ತಿಂದೇಬಿಟ್ಟಳು. ವರ್ಷಕ್ಕೊಮ್ಮೆ ಊರ ಜಾತ್ರೆಗೆಂದು ಅಪ್ಪ ಕೊಡುತ್ತಿದ್ದ ಐದೋ-ಹತ್ತೋ ರೂಪಾಯಿಗಳಲ್ಲಿ ಗರಿಷ್ಟ ಲಾಭ ಪಡೆಯುವ ಸಲುವಾಗಿ - ಇವಳಾಗಲೀ, ಇವಳ ಅಕ್ಕನಾಗಲೀ- ತಿನ್ನುವುದನ್ನೇನೂ ಕೊಳ್ಳದೇ, ಬಳೆಯನ್ನೋ, ಸರವನ್ನೋ ಕೊಂಡುಕೊಳ್ಳುತ್ತಿದ್ದರು. ಪೇಟೆಗಂತೂ ಹೋಗುತ್ತಿದ್ದುದೇ ಇಲ್ಲ, ಊರ ಆಸುಪಾಸಿನಲ್ಲೆಲ್ಲೂ ಅಂಗಡಿಗಳೂ ಇಲ್ಲ.

ಐಸ್ ಕ್ಯಾಂಡಿಯನ್ನು ಬೇರೆಯವರು ಸವಿಯುವಾಗ ಮಾಡುವ ತಣ್ಣನೆಯ ಆಸ್ವಾದನೆ ಏನೆಂಬುದೂ 10 ವರ್ಷದ ಇವಳಿಗೆ ಗೊತ್ತಿರಲಿಲ್ಲ. ಈಗ ಐಸ್ ಕ್ಯಾಂಡಿಯನ್ನು ತಿಂದವಳು, ಈ ಸಲ ಊರ ಜಾತ್ರೆಯಲ್ಲೂ ಒಂದು ತಿನ್ನುವುದೇ ಎಂದು ನಿರ್ಧರಿಸಿದಳು. ಐಸ್ ಕ್ಯಾಂಡಿಯ ಬಣ್ಣದಿಂದಾಗಿ ನಾಲಿಗೆ, ತುಟಿಗಳೆಲ್ಲ ಕೇಸರಿ ಬಣ್ಣಕ್ಕೆ ತಿರುಗಿದ್ದವು. ನಾಲಿಗೆಯನ್ನು ಹಲ್ಲುಗಳಿಗೆ ಉಜ್ಜಿಕೊಳ್ಳುತ್ತಾ ಮನೆಯ ಕಡೆಗೆ ಹೆಜ್ಜೆ ಹಾಕಿದಳು. ಆ ದಿನವೆಲ್ಲ ಐಸ್ ಕ್ಯಾಂಡಿಯ ಗುಂಗಿನಲ್ಲೇ ಕಳೆದಳು. ರಾತ್ರಿ ಕನಸಿನಲ್ಲಿಯೂ ಐಸ್ ಕ್ಯಾಂಡಿ ಬಂತು.

ಮಾರನೇ ದಿನ ಶಾಲೆಯ ಒಳಗೆ ಕಾಲಿಡುತ್ತಿದ್ದಂತೆ ದೊಡ್ಡ ಶಾಸ್ತ್ರಿಗಳ ಮಗಳು, ಶಿಲ್ಪ, ಬಂದು 50 ಪೈಸೆ ಸಾಲವನ್ನು ನೆನಪಿಸಿ ಹೋದಳು. ಸಂಜೆ ಮನೆಗೆ ಹೋದಮೇಲೆ ಅಪ್ಪನನ್ನು ಹೇಗಾದರೂ ಮಾಡಿ ಕೇಳೋಣ ಎಂದುಕೊಂಡಳು. ಸಂಜೆ ಅಂಗಳದಲ್ಲಿ ಕಾಲು ತೊಳೆದು ಮನೆಯೊಳಗ ಕಾಲಿಡುತ್ತಿದ್ದವಳಿಗೆ ಅಪ್ಪ ಅಮ್ಮ ಮಾತನಾಡಿಕೊಳ್ಳುತ್ತಿರುವುದು ಕೇಳಿಸಿತು- " ಈ ವರ್ಷ ಕೊಳೆ ರೋಗಕ್ಕೆ ತುತ್ತಾಗಿ ಅಡಿಕೆ ಬೆಳೆಯೆಲ್ಲ ಹಾಳಾಗಿ ಹೋತು. ಖರ್ಚು ತೂಗಿಸ್ಕಂಡು ಹೋಗದು ಹ್ಯಾಂಗನ? ಸಾಲಮಾಡಿ ಮರ್ಯಾದಿ ಕಳದು ಹೋಗ ಹಾಂಗೆ ಆಗದಿದ್ರೆ ಸಾಕು!"

ಸಾಲ ಮಾಡುವುದೆಂದರೆ ಮರ್ಯಾಡೆಗೇಡು ಎಂದು ರೇವತಿಗೆ ಗೊತ್ತಾಯಿತು. ಆದರೆ, ಮನೆಯ ಸ್ಥಿತಿ ಹೀಗಿರುವಾಗ ಅಪ್ಪನನ್ನ ಕೇಳುವುದು ಹೇಗೆ? ಗಾಬರಿಯಾಯಿತು. ಅಪ್ಪ ಒಮ್ಮೊಮ್ಮೆ ಸ್ವಿಚ್ ಬೋರ್ಡ್ ಮೇಲೋ ಅಥವಾ ಮಹಡಿ ಹತ್ತುವ ಮೆಟ್ಟಿಲ ಮೇಲೋ ನಾಣ್ಯಗಳನ್ನಿಟ್ಟು ಅಮ್ಮನ ಬೈಗುಳಕ್ಕೆ ಗುರಿಯಾಗುತ್ತಿದ್ದುದು ನೆನಪಾಯಿತು.ಹಣ ಎಲ್ಲೆಂದರಲ್ಲಿ ಇಡುವ ವಸ್ತುವಲ್ಲವಲ್ಲ. ಮಹಡಿಯ ಮೆಟ್ಟಿಲಿನ ಮೇಲೆ ಒಂದು ರುಪಾಯಿಯ ನಾಣ್ಯವಿತ್ತು. ಯಾರೂ ಇಲ್ಲದ ಹೊತ್ತು ನೋಡಿ, ಅದನ್ನು ತನ್ನ ಪಾಟಿ ಚೀಲದಲ್ಲಿ(ಸ್ಕೂಲ್ ಬ್ಯಾಗ್) ಇಟ್ಟುಕೊಂಡಳು.

ರೇವತಿ ಬೆಳಿಗ್ಗೆಯಿನ್ನೂ ಹಾಸಿಗೆಯಲ್ಲಿರುವಾಗಲೇ, ಅಮ್ಮನ ಮೇಲೆ ಕೋಪದಿಂದ ಹರಿಹಾಯುತ್ತಿರುವ ಅಪ್ಪನ ದ್ವನಿ ಕೇಳಿಸಿತು.
"ಒಂದು ವಸ್ತುನೂ ಇಟ್ಟ ಜಾಗದಲ್ಲಿ ಇರದಿಲ್ಲೆ. ನಿನ್ನೆ ಸಂಜೆ ಅಷ್ಟೇ ಏಣಿ ಮೆಟ್ಟಿಲ ಮೇಲೆ ಇಟ್ಟಿದ್ದಿ, ಬೆಳಿಗ್ಗೆ ನೋಡಿದ್ರೆ ಮಾಯಾ! ನೀನು ಗುಡಿಸಿ ಕಸದ ಜೊತೆ ಬಿಸಾಕಿದ್ಯನ?!"
ಅಮ್ಮ ಸಮಾಧಾನವಾಗಿ ಉತ್ತರಿಸಿದಳು- "ನೀವೇ ಬೇರೆಲ್ಲಾದ್ರೂ ಇಟ್ಟು ಮರೆಯದು ಹೊಸದಲ್ಲ. ಬೇರೆದು ಕೊಡ್ತಿ ತಗಳಿ".
ಅಮ್ಮ ಕೊಟ್ಟ ಸಾರಿ ಪಿನ್ ತೆಗೆದುಕೊಂಡು, ಅಪ್ಪ ಹಲ್ಲು ಪೆರಟುತ್ತ ಹೋಗಿದ್ದು ಹಾಸಿಗೆ ಸುತ್ತಿಡುತ್ತಿದ ರೇವತಿಗೆಲ್ಲಿಂದ ಗೊತ್ತಾಗಬೇಕು?!
ಅಪ್ಪ ಕೆಂಡಕಾರಿದ್ದು ತಾನು ಕದ್ದ ರೂಪಾಯಿಯ ಸಲುವಾಗಿಯೇ ಇರಬೇಕೆಂದುಕೊಂಡು, ಓಡಿಹೋಗಿ ಪಾಟಿ ಚೀಲದಲ್ಲಿ ಇಟ್ಟುಕೊಂಡಿದ್ದ ರೂಪಾಯಿಯ ನಾಣ್ಯವನ್ನು ಮರಳಿ ಮಹಡಿಯ ಮೆಟ್ಟಿಲ ಮೇಲೆ ಇಟ್ಟು, ಯಾರೂ ನೋಡಲಿಲ್ಲವೆಂಬುದನ್ನು ಪಕ್ಕಾ ಮಾಡಿಕೊಂಡಳು. ಮತ್ತೆ ಸಾಲ ತೀರಿಸುವ ಚಿಂತೆ ಶುರುವಾಯಿತು. ಇದಾದ ಮಾರನೆಯ ದಿನ, ಭಾನುವಾರ, ಮಾಗಿ ಚಳಿಗೆ ನಿಗುಟಿ, ನೆರೆಮನೆಯ ಕೇಶವ ಭಟ್ಟರು ನೆಗೆದುಬಿದ್ದರು. ಅವರ ಮೂಮ್ಮೊಗಳ ಜೊತೆ ಇವಳೂ ಚಟ್ಟದ ಹಿಂದೆ ಹಿಂದೆ ಹೊರಟಳು. ಹೋಗುವ ಹಾದಿಯಲ್ಲಿ ಯಾರೋ ಬೀಳಿಸಿಕೊಂಡ ಒಂದು ಪೈಸೆಯ ನಾಣ್ಯವನ್ನು ಕಂಡು ಎತ್ತಿಕೊಳ್ಳಲು ಹೋದವಳನ್ನು ಕೇಶವ ಭಟ್ಟರ ಮೊಮ್ಮಗಳು ತಡೆದು, "ಎತ್ಕಬೇಡ ರೇವತಿ, ಅದನ್ನು ಅಪ್ಪನೇ ಬೀಳ್ಸಿದ್ದು. ಇದೊಂದು ಪದ್ಧತಿ. ಸತ್ತವರು ಲೋಕದ ಮೋಹ ಕಳಚಿಕೊಳ್ಳಲಿ ಹೇಳಿ ಹಾಗೆ ಮಾಡ್ತ"
ಇನ್ನೂ ಐದಾರು ಒಂದು ಪೈಸೆಯ ನಾಣ್ಯಗಳನ್ನು ಹೋಗುವ ಹಾದಿಯಲ್ಲಿ ಬಿಳಿಸುತ್ತ ಹೋದರು.
"ಯಾರು ಸತ್ರು ಒಂದು ಪೈಸೆ ನಾಣ್ಯನೇ ಬೀಳಸ್ತ್ವ?" ಕೇಳಿದಳು ರೇವತಿ.
"ನಾವು ಅಷ್ಟೆಲ್ಲ ಅನುಕೂಲಸ್ತರು ಅಲ್ದಲೆ ಅದಕ್ಕೆ ಕಡಿಮೆ. ಶ್ರೀಮಂತರ ಮನೆಯವರೆಲ್ಲಾ ಐದು ಪೈಸೆ, ಹತ್ತು ಪೈಸೆ ಎಲ್ಲಾ ಹಾಕ್ತ ಹೇಳಿ ಅಣ್ಣ ಒಂದ್ಸಲ ಹೇಳಿದ್ದ" ಎಂದಳು.

ರೇವತಿಯ ತಲೆಯಲ್ಲಿ ಯೋಚನೆಯೊಂದು ಸುಳಿದು ಹೋಯಿತು- ಊರ ದೊಡ್ಡ ಶಾಸ್ತ್ರಿಗಳ ತಾಯಿಯಾದರೂ ಸತ್ತಿದ್ರೆ!

ಶವ ಸುಡಲು ಹೋದವರೆಲ್ಲ ಅಷ್ಟೇ ಸ್ನಾನ ಮಾಡಿ, ಊಟ ಮಾಡಿ, ಕೈ ತೊಳೆಯುತ್ತಿದ್ದಿರಬೇಕು ಮತ್ತೊಮ್ಮೆ ಸ್ಮಶಾನಕ್ಕೆ ಹೋಗಲು ಅಣಿಯಾಗುವಂತಾಯಿತು.

ಈ ಸಲ ದೊಡ್ಡ ಶಾಸ್ತ್ರಿಗಳ ತಾಯಿ ಗಂಗಮ್ಮ!
ಸುದ್ದಿ ತಿಳಿಸಲು ಬಂದ ಶಾಸ್ತ್ರಿಗಳ ನೆರೆಮನೆಯ ಸೋಮೇಶಣ್ಣನ ಬಳಿ ಅಪ್ಪ ಮಾತಾಡುತ್ತಿದ್ದರು; "ಇನ್ನಾದ್ರೂ ಶಾಸ್ತ್ರಿಗಳ ಮನೆಯಲ್ಲಿ ಮಂಗಳ ಕಾರ್ಯಕ್ಕೆ, ತಿಥಿಗೆ ದೊಡ್ಡ ಲಾಡು, ದೊಡ್ಡ ಹಪ್ಪಳ ಮಾಡಿ ಬಡಸ್ಗು(ಬಡಿಸಬಹುದು)! ಜುಗ್ಗ(ಜಿಪುಣ) ಮುದುಕಿಯ ಕಾಲ ಅಂತೂ ಮುಗಿತು"

ರೇವತಿ ಈ ಸಲ ಹೆಣ ಸುಡಲು ಹೋಗಲಿಲ್ಲ. ಎಲ್ಲರೂ ಹೆಣ ಸುಟ್ಟು ಮನೆಗೆ ಹೋಗಿ ಸ್ನಾನ ಮಾಡುತ್ತಿರಬಹುದಾದ ಸಮಯ ನೋಡಿ, ಹೆಣ ಹೋದ ಹಾದಿಯಲ್ಲಿ ಹೋಗಿ ನಾಣ್ಯಗಳನ್ನೆಲ್ಲ ಆಯ್ಡುಕೊಂಡಳು. ಒಂದು ಪೈಸೆಯ ಐದು ನಾಣ್ಯಗಳೂ, ಐದು ಪೈಸೆಯ ಹನ್ನೊಂದು ನಾಣ್ಯಗಳೂ ಸಿಕ್ಕವು. ಒಟ್ಟೂ, ಅರವತ್ತು ಪೈಸೆಗಳಾದವು. ಊರ ಎದುರಿನ ಅರಳಿ ಮರದಲ್ಲಿರುವ ಬೀರಪ್ಪ ದೇವರ ಕಲ್ಲಿನ ಬುಡಕ್ಕೆ ಐದು ಪೈಸೆಯನ್ನಿಟ್ಟು ಕೈ ಮುಗಿದು, " ಬೀರಪ್ಪ, ಈ ಐವತ್ತು ಪೈಸೆಗಳನ್ನ ಸಾಲ ತೀರಿಸಲು ಉಳಿಸಿಕೊಂಡಿರದು.
ನಿಂಗೆ ಐದು ಪೈಸೆ ಕೊಟ್ಟೆ. ನಾನು ಐದು ಪೈಸೆ ಇಟ್ಟಕಂಡ್ರೆ ಅಡ್ಡಿಲ್ಲೆ ಅಲ್ದ!"

ರೇವತಿ ಸಾಲ ತೀರಿಸಿಯಾಯಿತು. ಜಿಪುಣ ಮುದುಕಿಯ ಮನೆಯ ದುಡ್ಡು ಮತ್ತೆ ಮನೆ ಸೇರಿತು!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ