ಗುರುವಾರ, ಮೇ 17, 2018

ಹೇಳುವುದು ಬಹಳಷ್ಟಿದೆ! ನನಗೂ ಕೋಪ ಬಂದಿದೆ! (ಸುಮ್ಮನೆ ಒಂದು ಕವನ)

ತೆರೆದಿಡಲಾಗದ ಹಲವು ಮುಖಗಳಿವೆ ನನ್ನಲ್ಲಿ
ಇಂಬುಕೊಡದೇ ಮೊಗೆದು ಹೊರಚೆಲ್ಲಿದ್ದೇನೆ.
ಇನ್ನೊಂದು, ಮತ್ತೊಂದು, ಮಗದೊಂದು ಮುಖವಾಡಗಳ
ಪೀಠಿಕೆಯ ಪ್ರವೇಶಕ್ಕೂ ಎಣೆಯಿಲ್ಲದಷ್ಟು
ಪುರುಸೊತ್ತಿಲ್ಲದೇ
ಎಲ್ಲವನ್ನೂ ಬದಿಗೊತ್ತಿದ್ದೇನೆ.

ನಾಟಕ ಶಾಲೆಯ ಕದ ಮುಚ್ಚಿ
ಬಯಲಾಟಕ್ಕೆ ಹಪಹಪಿಸುವ ಕಾಲ
ಮತ್ತೆ ಬಾರದೇ,
ನನ್ನ ತೆರೆದ ಮುಖದ ಭಾವಗಳನ್ನು
ಬಣ್ಣ ಮೆತ್ತಿ ಕದ್ದು ಮುಚ್ಚಿ ಮುಚ್ಚಿಟ್ಟಿದ್ದೇನೆ.

ಕೋಳ ಹಾಕಿಕೊಂಡ ಕೈಗಳೂ
ಬಳೆ ತೊಟ್ಟ ಕೈಗಳೂ
ಕಣಕ್ಕಿಳಿದು ಕೀಟಲೆ ಎಬ್ಬಿಸುವಲ್ಲೆಲ್ಲ
ಕಣ್ಣ ಬಣ್ಣವೆಲ್ಲ ನೀರೊಡನೆ ಹರಿದು
ವಿರೋಧ ವ್ಯಕ್ತವಾಗಿದೆ;
ಕಾಟ ತಾಳದೇ ವಿಲ ವಿಲ ಒದ್ದಾಡಿ ಸತ್ತ
ಕೋಟಿ ಕೋಟಿ ಹುಳುಗಳಿಗಾಗಿ ಅತ್ತಿದ್ದೇನೆ.

ನನ್ನಲ್ಲೂ ಹಲವು ಮುಖಗಳಿವೆ,
ಹಲವು ಸನ್ನಿವೇಶಗಳಲ್ಲಿ
ಬಿಚ್ಚಿಡಲೂ ಆಗದೇ
ಮುಚ್ಚಿಡಲೂ ಆಗದೇ
ಒಳಗೊಳಗೇ ಸತ್ತಿದ್ದೇನೆ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ