ಬುಧವಾರ, ಮೇ 2, 2018

ಗಾಂಧಾರಿ ಬರೀ ಹೆಣ್ಣಲ್ಲ, ಹೆಣ್ಣಿನ ಪ್ರತೀಕ.

ಹೆಣ್ಣು ಹುಟ್ಟಿತೆಂದು
ಅಳದೇ ಇರುವುದು ಹೇಗೆ?!
ಪ್ರತೀ ಹೆಣ್ಣಿಗೂ ಗೊತ್ತು
ಗಾಂಧಾರಿಯ ಕಣ್ಣು ಪಟ್ಟಿಯ ಗುಟ್ಟು.

ಮೈಮೇಲೆಲ್ಲ ಕಣ್ಣಾಡಿಸುವ
ಕಪ್ಪು ಕನ್ನಡಕದೊಳಗಿನ ಕಣ್ಣುಗಳನ್ನು
ಪ್ರಶ್ನಿಸಲಾಗದವಳಿಗೆ,
ಕತ್ತಲಾಗುವುದರೊಳಗಾಗಿ
ಮನೆ ಸೇರುವುದೇಕೆಂಬುದಕ್ಕೆ
ಉತ್ತರ ಗೊತ್ತು.

ಮನೆಗೆ ಬಂದ ನೆಂಟ
ಗಂಟು ಬೀಳುವ ಸಂಕಟ,
ಒಂಟಿ ಹಾದಿಯಲ್ಲಿ
ಅಪರಿಚಿತನ ಕಾಟ,
ಕೆಲವೊಮ್ಮೆ-
ಶಾಲೆಯ ಶಿಕ್ಷಕನ ನೋಟಕ್ಕೆ
ತಲೆ ತಗ್ಗಿಸುವವಳು.

ಪ್ರೀತಿಸಿ ಕೈ ಹಿಡಿದು ನಂಬಿಸಿ
ಚುಂಬಿಸಿ ಕೈ ಕೊಡುವವರು,
ಒಮ್ಮೊಮ್ಮೆ-
ಕೈ ಹಿಡಿದು ತಾಳಿ ಕಟ್ಟಿದವರೂ
ಕಿರುಕುಳ ಕೊಡುವರು.

ಕಚೇರಿಯಲ್ಲಂತೂ ಚೀರುವಂತಿಲ್ಲ,
ಕೆಲಸ ಬಿಟ್ಟು ಮನೆಯಲ್ಲೂ ಕೂರುವಂತಿಲ್ಲ!(ಹೊಟ್ಟೆಪಾಡು)

ಬಸ್ಸಿನಲ್ಲೋ, ಜಾತ್ರೆಯಲ್ಲೋ,
ದೇವಸ್ಥಾನದ ನೂಕು ನುಗ್ಗಲಿನಲ್ಲೋ,
ಎಲ್ಲೆಲ್ಲೂ ಕುಗ್ಗುವವಳು ಹೆಣ್ಣು
ಮುಚ್ಚಿಕೊಂಡು ಕಣ್ಣು!!

ಪ್ರತೀ ಹೆಣ್ಣಿಗೂ ಗೊತ್ತು
ಗಾಂಧಾರಿಯ ಕುರುಡಿನ ಗುಟ್ಟು.

ಗಾಂಧಾರಿ ಬರೀ ಹೆಣ್ಣಲ್ಲ,
ಹೆಣ್ಣಿನ ಪ್ರತೀಕ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ