ಬುಧವಾರ, ಮೇ 9, 2018

ಸಾವು ಯಾರನ್ನೂ ಹೆದರಿಸದೆ ಬಿಟ್ಟಿಲ್ಲ, ಬದುಕೂ ಅಷ್ಟೇ! (ಕಥೆ)

ಮಣಿಕರ್ಣಿಕಳನ್ನು ಉದ್ದೇಶಿಸಿ ಲೈಬ್ರರಿಯ ಒಂದು ಮೂಲೆಯಲ್ಲಿ ಯಾರೋ  ಬರೆದು ಅಡಗಿಸಿಡುತ್ತಿದ್ದ ಪತ್ರವನ್ನು ಓದಿ ಮುಜುಗರಕ್ಕೊಳಗಾದೆನೆಂದು ಅಂದುಕೊಂಡವಳಿಗೆ, ಮುಂದೊಂದು ದಿನ ಮಣಿಕರ್ಣಿಕಾ ಯಾರೆಂದು ಹುಡುಕುತ್ತ ಅಲೆಯುವ ಅನಿವಾರ್ಯತೆ ಬಂದಿದ್ದಾದರೂ ಏಕೆ?
ಅದೊಂದು ಪುಟ್ಟ ಕಥೆ.

ಎಂದಿನಂತೆಯೇ ಅಂದೂ ಕೂಡ  ಸಂಶೋಧನ ವಿದ್ಯಾರ್ಥಿಗಳಿಗೆಂದೇ ಮೀಸಲಿಟ್ಟ ಲೈಬ್ರರಿಯ ರೀಡಿಂಗ್ ರೂಮಿನ ಮೂಲೆಯ ಡೆಸ್ಕಿಗೆ ಬೆಳಿಗ್ಗೆ 9 ಘಂಟೆಗೇ ಹೋಗಿ ಕುಳಿತಿದ್ದೆ. ಡೆಸ್ಕಿನ ಡ್ರಾ ದಲ್ಲಿ ಹಿಂದಿನ ದಿನ ಅರ್ಧ ಓದಿ ಬಿಟ್ಟಿದ್ದ ಪುಸ್ತಕವಿತ್ತು. ಡ್ರಾ ಎಳೆದು ಪುಸ್ತಕ ಹೊರತೆಗೆದ ಮೇಲೆ ಅಲ್ಲೊಂದು ಮಡಿಚಿದ ಬಿಳಿಯ ಹಾಳೆ ಕಾಣಿಸಿತು. ತೆರೆದು ಓದಿದೆ. ಆ ಪತ್ರ ಹೀಗಿತ್ತು-

ನಲ್ಮೆಯ ಮಣಿಕರ್ಣಿಕಾ,
ನನ್ನ ಈ ಪತ್ರದ ಕೆಲವೇ ಸಾಲುಗಳನ್ನು ಓದಿ ಎಸೆದುಬಿಡಬೇಡ. ಇದು ನಿನಗೆ ಪ್ರೇಮಪತ್ರದಂತೆ ಕಾಣಿಸಬಹುದು, ಆದರೆ ನನಗಿದು ನನ್ನನ್ನು ತೆರೆದಿಡುವ ಒಂದು ಮಾಧ್ಯಮ.
ಪ್ರೀತಿಸುವ ಕಾಲದಲ್ಲಿ ಪ್ರೀತಿಸುವವರನ್ನು ಪ್ರೀತಿಸಿಬಿಡಬೇಕು.  ಪ್ರೀತಿಯ ಹಂಬಲದಲ್ಲೇ ಬದುಕು ಕಳೆಯುವುದಕ್ಕಿಂತ, ಪ್ರೀತಿಸಿ ಹಗುರಾಗುವುದೇ ಲೇಸು.
ಸ್ವಾಮಿ ವಿವೇಕಾನಂದರು ದೇವರನ್ನು ಕಂಡವರು. ಕಾಳಿ ಇರುವಳೆಂಬ ನಂಬಿಕೆಯೇ ಅವರಿಗಾದ ದರ್ಶನ. ಕಾಳಿ ಹೇಗೆ ಇರಬಹುದೆಂಬ ಕಲ್ಪನೆಯನ್ನು ಅವರು ಮನದಟ್ಟು ಮಾಡಿಕೊಂಡಿದ್ದರೋ ಹಾಗೇ ಕಾಣಿಸಿಕೊಂದಳು ದೇವಿ?
ಈಗ ನೀನೂ ನಾನು ಯಾರಾಗಿರಬಹುದೆಂಬ ಊಹೆ ಮಾಡುತ್ತಿರಬಹುದು! ನನ್ನ ಭೌತಿಕ ಶರೀರದ ಕಲ್ಪನೆ!  ನನ್ನ ಹಾವ -ಭಾವ, ಇಷ್ಟ-ಕಷ್ಟ, ಊಟ-ತಿಂಡಿ, ನನ್ನ ಕೆಲಸ, ನನ್ನ ಮನೆತನ , ಜಾತಿ-ಧರ್ಮ ಇವೆಲ್ಲವುಗಳು ನಿನ್ನ ಯೋಚನೆಗೆ ಬರವುದಕ್ಕೂ ಮುಂಚೆ, ನನ್ನದೊಂದು ಚಿತ್ರ- ಅಂದರೆ - ದೇಹದ ಆಕಾರ ನಿನ್ನ ಮನಸ್ಸಿನಲ್ಲಿ ರಚನೆಗೊಂಡಿರಬಹುದು. ದೇಹವಿಲ್ಲದವನಿಗೆ ಅಸ್ಥಿತ್ವವೆಲ್ಲಿ? ಆ ಯೋಚನೆಯನ್ನು ಬಿಡು. ನನಗೂ ನಿನ್ನಷ್ಟೇ ವಯಸ್ಸು, ನಿನಗಿಂತಲೂ ಸುಂದರನೇ. ನನ್ನ ಮನಸ್ಸು ಹೇಗಿರಬಹುದೆಂಬ ಕಲ್ಪನೆಯನ್ನು ನಿನ್ನಿಂದ ಮಾಡಲು ಸಾಧ್ಯವೇ??......

ನನ್ನ ಭಾವನೆಗಳು-ಯೋಚನೆಗಳು ನಿನಗಒಪ್ಪಿಗೆಯಾಗುವವರೆಗೆ ಹೀಗೇ ಪ್ರೇಮ ಪತ್ರಗಳನ್ನು ಓದುತ್ತ ಕುಳಿತಿರಲು ನಿನ್ನಿಂದ ಸಾಧ್ಯವೇ?
ನಿನ್ನವನೆಂದು ನನಗೆ ನಾನೇ ಅಂದುಕೊಂಡಿರುವವ - ಶಶಿ

ಯಾರು ಯಾರಿಗೆಂದು ಬರೆದ ಪತ್ರವೋ! ಆದರೆ ಅದು ವಿಶಿಷ್ಟವಾಗಿತ್ತು. ಓದಿ ಎಲ್ಲಿತ್ತೊ ಅಲ್ಲೇ, ಹೇಗಿತ್ತೋ ಹಾಗೇ ಇಟ್ಟುಬಿಟ್ಟೆ.
ಆ ಪತ್ರವನ್ನು ಓದಿದ ನನಗೆ - ನನಗೂ ಯಾರಾದರೂ ಪ್ರೇಮಪತ್ರ ಬರೆಯಬಾರದೆ ಎಂದೊಮ್ಮೆ ಅನ್ನಿಸದೇ ಇರಲಿಲ್ಲ. ಏನೇನೋ ಭಾವನೆಗಳು ಮನಸ್ಸಿನೊಳಗೆಲ್ಲ ಹರಿದಾಡಿ, ನನ್ನ ಓದನ್ನು ಗಾಳಿಗೆ ತೂರಿದವು. ಮ್ಯಾಗಜಿನ್ ಸೆಕ್ಷನ್ ಗೆ ಹೋಗಿ, ಮ್ಯಾಗಜಿನ್ ಗಳ ಮೇಲೆ ಕಣ್ಣಾಡಿಸುತ್ತ ಕುಳಿತೆ. 12.30 ಕ್ಕೆ ಹೋಗಿ ತರಗತಿಯಲ್ಲಿ ಕುಳಿತರೂ ಆ ಪತ್ರದ್ದೆ ಯೋಚನೆ! ಯಾರು ಈ ಮಣಿಕರ್ಣಿಕಾ ಮತ್ತವಳನ್ನು ಪ್ರೀತಿಸುವ ಶಶಿ? ಎಷ್ಟೊಂದು ವಿಶೇಷವಾದ, ಸಿನಿಮಾಗಳಲ್ಲಿ ಮಾತ್ರ ಕಾಣಬಹುದಾದ ಪ್ರೀತಿಸುವ ಬಗೆ. ಈ ಪ್ರೇಮಿಗಳು ಯಾರೆಂದು ಪತ್ತೆ ಹಚ್ಚಬೇಕು ಎಂದುಕೊಂಡೆ.

ಮಾರನೆಯ ದಿನ ಡ್ರಾ ದಲ್ಲಿ ಯಾವ ಪತ್ರವೂ ಇರಲಿಲ್ಲ. ಆದರೆ, ಲ್ಲೈಬ್ರರಿ ಯಿಂದ  ಮದ್ಯಾಹ್ನ12.15ಕ್ಕೆ ಹೊರ ಬರುವಾಗ ಎಂಟರಿ ರಜಿಸ್ಟರ್ ಬುಕ್ ನಲ್ಲಿರುವ ಹೆಸರುಗಳ ಮೇಲೆ ಒಮ್ಮೆ ಕಣ್ಣು ಹಾಯಿಸಿದೆ. ಹಿಂದಿನ ದಿನದ ಲಿಸ್ಟ್ ನಲ್ಲಿ ಮಣಿ ಎಂಬ ಹೆಸರು ಕಾಣಿಸಿದರೂ, ಶಶಿಯ ಹೆಸರು ಕಾಣಿಸಲಿಲ್ಲ. ಮುಂದಿನ ನಾಲ್ಕು ದಿನಗಳು ಯಾವ ಪತ್ರಗಳೂ ಇಲ್ಲದೇ ಕಳೆದವು! ಆದರೆ ನಾನು ರಜಿಸ್ಟರ್ ಬುಕ್ ನ್ನು ಪರಿಶೀಲಿಸದೇ ಇರುತ್ತಿರಲಿಲ್ಲ. ದಿನವೂ ಮಣಿ ಎನ್ನುವ ವ್ಯಕಿಯ ಹೆಸರು ಮಾತ್ರ ಸಿಗುತ್ತಿತ್ತೇ ಹೊರತು, ಶಶಿಯ ಹೆಸರಿನ ಸುಳಿವೇ ಇರಲಿಲ್ಲ!  ಐದನೇ ದಿನ ಇನ್ನೊಂದು ಪತ್ರ ಅದೇ ಡ್ರಾ ದಲ್ಲಿ ಸಿಕ್ಕಿದ ದಿನವೂ, ಮತ್ತದರ ಹಿಂದಿನ ದಿನವೂ ಎಂಟ್ರಿ ರಜಿಸ್ಟರ್ ನಲ್ಲಿ ಶಶಿಯ ಹೆಸರೇ ಇರಲಿಲ್ಲ. ಯಾರೋ ಶಶಿ ಎನ್ನುವ ಹೆಸರಿಟ್ಟುಕೊಂಡು ಪತ್ರ ಬರೆಯುತ್ತಿರಬಹುದೆಂದುಕೊಂಡೆ.

ಐದನೇ ದಿನ ಸಿಕ್ಕಿದ ಪತ್ರದ ಸಾರಾಂಶ ಇಷ್ಟು-
ನಲ್ಮೆಯ ಮಣಿಕರ್ಣಿಕಾ,
ನೀನು ನನ್ನ ಹಿಂದಿನ ಪತ್ರವನ್ನು ಓದಿ, ನನ್ನ ಬಗೆಗೆ ಕೊಂಚವಾದರೂ ಭಾನೆಗಳನ್ನು ತಾಳಿದ್ದರೆ ನಾನು ಮುಂದೆ ಬಾಳಿಯೇನು!
ಆಕರ್ಷಣೆಯನ್ನು ಮೀರಿದ ಪ್ರೀತಿ ನಮ್ಮದಾಗಬೇಕೆನ್ನುವುದು ನನ್ನ ಆಸೆ. ಮನುಷ್ಯ ಮನುಷ್ಯನ ನಡುವೆ, ಜೀವಿ ಜೀವಿಗಳ ನಡುವೆ ಇರುವುದು ಪ್ರೀತಿಯಷ್ಟೆ. ಆಕರ್ಷಣೆ ನಿರ್ಜೀವ ವಸ್ತುಗಳಿಗೆ ಸಂಬಂಧಿಸಿದ್ದು. ಅದೇನಿದ್ದರೂ ವಿಜ್ಞಾನಿಗಳ ವಿಷಯ ವಸ್ತು...........
......ಪ್ರೀತಿ ಜಗದ ನಿಯಮ.

ಪ್ರೀತಿಸುವ ಮುನ್ನ ಪರಾಮರ್ಶಿಸುವುದೂ ಸಹಜ.
ಇಂತಿ ನಿನ್ನವನಾಗುತ್ತಿರುವ- ಶಶಿ.

ಯಾರದ್ದೋ ಪತ್ರವನ್ನು ಕದ್ದು ಓದುವುದಕ್ಕೆ ನನಗೆ ಮುಜುಗರವಾಗುತ್ತಿತ್ತು. ಆದರೆ, ಆ ಪತ್ರದ ಸೆಳೆತ ನನ್ನ ಮುಜುಗರವನ್ನೂ ಮೀರಿದ್ದಾಗಿತ್ತು.

ಮುಂದೆ ವಾರಕ್ಕೆರಡು ಪತ್ರಗಳು ಡ್ರಾ ದಲ್ಲಿ ಬಂದು ಕೂರತೊಡಗಿದವು. ಜೋನ್ ಆಫ ಅರ್ಕ, ಮ್ಯಾಝಿನಿ, ಲೋಹಿಯಾ, ಪಾಯಿಥಾಗೋರಸ್, ಬಾಬ್ ಮ್ಯಾರ್ಲಿ, ರಾಜ್ ಕಪೂರ್, ಲತಾ ಮಂಗೇಶ್ಕರ್ ಇನ್ನೂ ಯರ್ಯಾರಾದ್ದೋ ವಿಚಾರಗಳನ್ನು ಪ್ರೀತಿಗೆ ತಳಕು ಹಾಕಿ ಬರೆಯುತ್ತಿದ್ದ ಪ್ರೇಮ ಪತ್ರಗಳು ನನ್ನನ್ನೇ ಮರುಳುಮಾಡಿದ್ದವು. ಇನ್ನು ಆ ಮಣಿಕರ್ಣಿಕಾಳ ಹೃದಯ ಹೇಗೆ ಹೂಡೆದುಕೊಳ್ಳುತ್ತಿತ್ತೋ?!  ಪ್ರೀತಿಯನ್ನು ಹೇಗೆ ತಡೆದುಕೊಳ್ಳುತ್ತಿತ್ತೋ!

ಹೀಗೇ ಮೂರೂ ತಿಂಗಳುಗಳು ಕಳೆದಿರಬಹುದು. ಗುರುವಾರ ಪತ್ರ ಡ್ರಾ ದಲ್ಲಿ ಇರಬಹುದಾದ ದಿನ; ಆದರೆ ಇರಲಿಲ್ಲ. ನಾನ್ಯಾಕೆ ಬೇಜಾರಾದೆ ಎಂದು ನನಗೇ ಗೊತ್ತಾಗಲಿಲ್ಲ. ಮಳೆ ಬರುವ ವಾತಾವರಣವಿತ್ತು. ಲೈಬ್ರರಿಯ ಎದುರಿನ ಗಾರ್ಡನ್ ತುದಿಯ ಕಟ್ಟೆಯ ಮೇಲೆ, ಮೇಲೆ ನೋಡುತ್ತಾ ಕುಳಿತೆ. ಕೈಗಳು ತಾವಾಗೇ ಪಕ್ಕದಲ್ಲಿರುವ ಗಿಡದಿಂದ ಹೂ ಕೀಳಲು ತೊಡಗಿಕೊಂಡಿದ್ದವು. ನಾನು ಕುಳಿತಲ್ಲಿಂದ ರಸ್ತೆಯ ಇಳುಕಲು ಕಾಣಿಸುತ್ತಿತ್ತು. ಯಾವುದೊ ಜೀವನದ ವ್ಯಾಪಾರ ಮುಗಿಸಿ ಹೊರಟ ದೇಹವನ್ನು ಗಾಡಿಯಲ್ಲಿ ಕುಕ್ಕರುಗಾಲಿನಲ್ಲಿ ಕೂರಿಸಿಕೊಂಡು ಲೈಬ್ರರಿ ಯ ಎದುರಿನ ಸ್ಮಶಾನದಲ್ಲಿ ಮಣ್ಣು ಮಾಡಲು ತರುತ್ತಿದ್ದರು. ಹೆಣದ ಮೆರವಣಿಗೆಯನ್ನ ಲೈಬ್ರರಿಯ ಎದುರು ಒಮ್ಮೆ ನಿಲ್ಲಿಸಿದರು. ಲೈಬ್ರರಿಯ ಒಳಗಿದ್ದವರೊಂದಿಷ್ಟು ಜನ ಓಡೋಡಿ ಬಂದು ನೋಡಿ ಹೋದರು. ನಾನೂ ನೋಡಲು ಎದ್ದು ಹೊರಟೆ. ಯಾರೋ ಹೇಳಿದರು-" ಇಲ್ಲ ಲೈಬ್ರರಿ ಸೈನ್ಸ್ ಓದುತ್ತಿದ್ದ ಹುಡುಗ. ಏಕ್ಸಿಡೆಂಟ್ ನಾಗ ಹೊಂಟ್ ಹೋದ ನೋಡ್ರಿ. ನಸೀಬ್ ಕೆಟ್ಟಿದ್ದ ಇರಬೇಕ!"

ನನಗೆ ಶವದ ಮುಖದ ಗುರುತು ಹತ್ತಲಿಲ್ಲ. ಒಂದು ರೀತಿ ಅಸಹ್ಯಕರವಾಗಿ ಕಳೆಗುಂದಿದ ಮುಖ, ಮುಚ್ಚಿದ ಕಣ್ಣು, ಹತ್ತಿ ತುರುಕಿದ ಮೂಗು, ಭಸ್ಮ ಗಂಧ ಮೆತ್ತಿದ ಹಣೆ- ನಾನು ನೋಡಿದ್ದ ಹುಡುಗನೇ ಆದರೂ ಈಗ ಗುರುತಿಸುವುದು ಹೇಗೆ? ಸುಮ್ಮನೇ ನಾನು ಕಿತ್ತಿದ್ದ ಹೂಗಳನ್ನು ಶವಕ್ಕೆರಚಿ ಬಂದೆ. ಶವ ಮಸಣದ ಕಡೆಗೆ ಯಾತ್ರೆ ಹೊರಟಿತು. ನಾನು ಲೈಬ್ರರಿಯ ಒಳಗೆ ಹೋಗಿ ಪುಸ್ತಕವನ್ನು ಹಿಡಿದು ಕೂತೆ.
ಏನೇನು ಓದುವುದೆಂದು ಯೋಚಿಸುತ್ತಿರಬೇಕಾದರೆ, ಮಳೆಯ ದೊಡ್ಡ ದೊಡ್ಡ ಹನಿಗಳು ಬೀಳುವ ಸದ್ದು ಕೇಳಿಸಿತು. ಅದು ಬೇಸಿಗೆಯ ಮೊದಲ ಮಳೆ. ಹೊರಗಿನ ಚೆಲುವನ್ನು ನೋಡಲೆಂದು ಲೈಬ್ರರಿಯ ನಾಲ್ಕನೇ ಮಹಡಿಯ ಮೂಲೆಗೆ ಹೋಗಿ ನಿಂತುಕೊಂಡೆ. ಮಳೆ ಜೋರಾಯಿತು.

ಸ್ಮಶಾನದಲ್ಲಿ ಹೆಣವನ್ನು ಮಣ್ಣು ಮಾಡಲು ಹೋದವರ ಕಣ್ಣೀರು ಮಳೆಯ ಹನಿಯೊಂದಿಗೆ ಹರಿದು ಹಳ್ಳ ಸೇರುತ್ತಿರುವುದು ನಾನು ನಿಂತ ಜಾಗದಿಂದ ಕಾಣಿಸುತ್ತಿತ್ತು. ನನ್ನ ಕಣ್ಣೂ ನಿರಾಡಿತು. ಸಾವು ಯಾರನ್ನೂ ಹೆದರಿಸದೆ ಬಿಟ್ಟಿಲ್ಲ, ಬದುಕೂ ಅಷ್ಟೇ! ಕಷ್ಟದ ಬದುಕಿಗಿಂತ ಸಾವೇ ಸುಲಭದ್ದು. ಆದರೇನು ಮಾಡುವುದು ಎಲ್ಲರಿಗೂ ತಮ್ಮವರೆನ್ನುವವರೊಬ್ಬರು ಇದ್ದೇ ಇರುತ್ತಾರೆ; ಎಂದರೆ ಬದುಕುವುದು ಪರರಿಗಾಗಿಯೇ? ?.... ಹೀಗೇ ಯಾವುದೊ ಯೋಚನೆಗಳ ಸುಳಿಯಲ್ಲಿ ಸಿಕ್ಕು ಮಳೆಯನ್ನು ಸವಿಯಲಿಲ್ಲ. ನನ್ನ ಒಳಗು ಯಾವುದೋ ರೋದನೆಯ ಚಕ್ರಕ್ಕೆ ಸಿಕ್ಕಿಹಾಕಿಕೊಂಡು ಪಡೆದ ವೇಗಕ್ಕೆ, ನನ್ನ ಕಣ್ಣುಗಳಿಂದಲೂ ಧಾರಾಕಾರವಾಗಿ ಮಳೆ ಸುರಿಯಲಾರಂಭಿಸಿತು.

ಮಾರನೆಯ ದಿನ ಡ್ರಾ ದಲ್ಲಿ ಪತ್ರ ಬಂದು ಕುಳಿತಿತ್ತು. ತೆಗೆದು ಓದಲು ಪ್ರಾರಂಭಿಸಿದ್ದೆನಷ್ಟೆ, ಯಾರೋ ನನ್ನ ಪಕ್ಕ ಬಂದು ನಿಂತರು. ನಾನು ತಲೆಯೆತ್ತಿ ನೋಡುವುದರೊಳಗಾಗಿ ಮಾತು ಪ್ರಾರಂಭಿಸಿದ್ದರು. "ಮಣಿಕರ್ಣಿಕಾ ಮೇಡಮ್, ನಿಮ್ಮ ಜೊತೆ ಸ್ವಲ್ಪ ಮಾತಾಡ್ ಬೇಕಿತ್ತು"
"ಮಾತಾಡ್ ಬಹುದು. ಆದ್ರೆ, ನಾನು ಮಣಿಕರ್ಣಿಕಾ ಅಲ್ವಲ್ಲ!"
"ಮತ್ತೆ ಈ ಪತ್ರ ಯಾಕೆ ಓದ್ತಿದಿರೀ?"
ನನ್ನಲ್ಲಿ ಉತ್ತರವಿರಲಿಲ್ಲ. ಅವಮಾನವಾಯಿತು. ಅಪಚಾರವಾಯಿತು. ತಪ್ಪಾಯಿತು. ಇಷ್ಟು ದಿನ ನನ್ನ ತಪ್ಪು ನನಗೆ ಯಾಕೆ ಕಾಣಿಸಲಿಲ್ಲ ಎಂದು ಒಳಗೊಳಗೇ ಕೊರಗಿದೆ.
ಆದದ್ದಾಗಲಿ ಎಂದು ಅವರಲ್ಲಿ ನಡೆದದ್ದೆಲ್ಲವನ್ನೂ ಹೇಳಿಕೊಂಡುಬಿಟ್ಟೆ.
"ನಾನು ಶಾಮ್, ಮೊನ್ನೆ ತೀರಿಹೋದನಲ್ಲಾ ಲೈಬ್ರರಿ ಸೈನ್ಸ್ ಹುಡುಗ-ಚಂದ್ರ ಅಂತ -ಅವನ ಫ್ರೆಂಡ್. ಅವನೇ ಈ ಪತ್ರಗಳನ್ನ ಬರೀತಿದ್ದಿದ್ದು. ಮೊನ್ನೆ ಊರಿಗೆ ಹೊರಟವನು ಈ ಪತ್ರವನ್ನ ನನ್ನ ಕೈಗೆ ಕೊಟ್ಟು ಶುಕ್ರವಾರ ಈ ಜಾಗದಲ್ಲಿ ಇಡಲಿಕ್ಕೆ ಹೇಳಿದ್ದ. ಅವನ ಕೊನೆಯ ಪತ್ರವನ್ನು ಮಣಿಕರ್ಣಿಕಾಳಿಗೆ ತಲುಪಿಸಿ, ಅವನ ದುರ್ಮರಣದ ಸುದ್ದಿಯನ್ನೂ ಹೇಗಾದರೂ ಮಾಡಿ ತಿಳಿಸಿಬಿಡೋಣ ಎಂದು ಯೋಚಿಸಿದ್ದೆ."
"ಅವನು ಬರೆದ ಎಲ್ಲಾ ಪಾತ್ರಗಳನ್ನೂ ಓದಿದ್ದೇನೆ.ಅವನ ಪ್ರೀತಿ ಅದ್ಭುತವಾದದ್ದಾಗಿತ್ತು. ಮಣಿಕರ್ಣಿಕಾ ಅವನ ಸಾವನ್ನು ಸಹಿಸುವುದಿಲ್ಲ"
"ವಿಷಯ ತಿಳಿಸದಿದ್ದರೆ ಯಾರೋ ಇಷ್ಟು ದಿನ ತಮಾಷೆಗೆ ಮಾಡಿದ್ದಾರೆಂದು ಭಾವಿಸುವುದಿಲ್ಲವೇ?!"
ಪಾತ್ರವನ್ನು ಅದೇ ಡ್ರಾದಲ್ಲಿ ಇಟ್ಟೆವು. ಒಂದು ವಾರವಾದರೂ ಆ ಪತ್ರ ಅಲ್ಲೇ ಉಳಿಯಿತು.

ಮುಂದಿನ ದಿನಗಳಲ್ಲಿ ಮಣಿಕರ್ಣಿಕಾಳಿಗಾಗಿ ಹುಡುಕಾಟ ಪ್ರಾರಂಭವಾಯಿತು. ಲೈಬ್ರರಿಯ ರಜಿಸ್ಟರ್ ನಲ್ಲಿರುವ ಮಣಿ ಯಾವುದೋ ಮಣಿಕಾಂತನೆಂದು ತಿಳಿಯಿತು.
ಚಂದ್ರನ ಸ್ನೇಹಿತರು- ಆಗಾಗ ಮಣಿಕರ್ಣಿಕಾಳ ಹೆಸುರನ್ನು ಅವನ ಬಾಯಿಯಲ್ಲಿ ಕೇಳಿದ್ದೆವೇ ಹೊರತು ಅವಳನ್ನು ಕಂಡಿಲ್ಲ ಎಂದರು. ಅವನ ಅಣ್ಣನಲ್ಲಿ ವಿಚಾರಿಸಿದೆವು. ಚಂದ್ರನ ರೂಮಿನಲ್ಲಿ ಸುಳುಹಿಗಾಗಿ ಹುಡುಕಿ ನೋಡೋಣ ಎಂಬ ಸಲಹೆಯನ್ನು ಕೊಟ್ಟನು. ಯೂನಿವರ್ಸಿಟಿಯ ಪಕ್ಕದಲ್ಲೇ ಇದ್ದ ಅವನ ಮನೆಗೆ ಹೋಗಿ ಸಾಕಷ್ಟು ಪರಿಶೀಲನೆ ನಡೆಸಿದೆವು. ಯಾವುದೇ ಸುಳಹೂ ಸಿಗದಾಯಿತು. ಅಲ್ಲೇ ಕುಳಿತು ಬೆವರೊರೆಸಿಕೊಳ್ಳುತ್ತಿರುವಾಗ, ಮೇಲೆ ಎತ್ತರದ ಶೆಲ್ಫ್ ಮೇಲೆ ಹಾಳೆಗಳು ಅತ್ತಿತ್ತಲಾದ ದೊಡ್ಡ ನೋಟ್ ಪ್ಯಾಡ್ ಕಾಣಿಸಿತು. ಅವನು ಬರೆದ ಪತ್ರಗಳೆಲ್ಲವೂ ಅಲ್ಲಿ ಸಿಕ್ಕವು. ಪತ್ರಗಳೆಲ್ಲ ಇಲ್ಲೇ ಇವೆ ಎಂದರೆ, ಮಣಿಕರ್ಣಿಕಾ ಅವನ ಪತ್ರಗಳನ್ನೂ- ಪ್ರೀತಿಯನ್ನೂ ಅಲಕ್ಷಿಸಿದ್ದಳೆಂದೆ!?

ಪ್ರತೀ  ಪತ್ರಗಳ ಹಿಂಭಾಗದಲ್ಲೂ ಪುಟ್ಟ ಪುಟ್ಟ ಟಿಪ್ಪಣಿಗಳಿದ್ದವು.
ಮೊದಲ ಪತ್ರ- ಓದಿ, ಮರಳಿ ಡ್ರಾದಲ್ಲಿ ಯಾಕೆ ಇಟ್ಟು ಹೋದಳು?
ಎರಡನೇ ಪತ್ರ- ತಲೆಯೆತ್ತದೇ ಓದಿ ಮುಗಿಸಿದಳು.
ಮೂರನೇ- ಯಾವುದೋ ಸಾಲನ್ನು ನೋಟ್ ಮಾಡಿಕೊಂಡಳು.
ನಾಲ್ಕನೇ- ನಿನ್ನೆ ಮೊನ್ನೆಯೆಲ್ಲಾ ಪಾತ್ರಕ್ಕಾಗಿ ಪಕ್ಕದ ಡ್ರಾಗಳಲ್ಲೂ ತಡಕಾಡಿದ್ದಳು.
ಐದನೇ- ಬಾಬ್ ಮ್ಯಾರ್ಲಿಗಾಗಿ ಮ್ಯೂಸಿಕ್ ಸೆಕ್ಕ್ಷನ್ ಗೆ ಹೋದಳು.
ಆರನೇ- ಲತಾಜೀಯ ಹಾಡನ್ನು ಗುನುಗುತ್ತ ಓದುತ್ತಿದ್ದಳು.
.....ಹೀಗೇ ಟಿಪ್ಪಣಿಗಳನ್ನು ಓದುತ್ತ ಹೋದಂತೆ, ನನಗೆ ಮಣಿಕರ್ಣಿಕಾ ಯಾರೆಂದು ತಿಳಿದು ಹೋಯಿತು.
ನನ್ನ ಕಣ್ಣೀರ ಕಟ್ಟೆ ಒಡೆಯಿತು. ಶಾಮನಿಗೂ, ಚಂದ್ರನ ಅಣ್ಣನಿಗೂ ಮಣಿಕರ್ಣಿಕಾ ಕಾಣಿಸಿದಳು. ಯಾರ ಸಮಾಧಾನದ ಮಾತುಗಳಿಗೂ ನಾನು ಕುಸಿದು ಹೋಗುವುದನ್ನು ತಡೆಯುವ ಶಕ್ತಿ ಇರಲಿಲ್ಲ.

ಅವನ ಕೊನೆಯ ಪತ್ರದಲ್ಲೊಂದು ಕವನವಿತ್ತು. 
ಪ್ರೀತಿಸೋಣ ಗೆಳತಿ
ಮತ್ತೆ ಮತ್ತೆ ಪ್ರೀತಿಸೋಣ ಗೆಳತಿ
ಸತ್ತಮೇಲೂ ಮತ್ತೆ ಹುಟ್ಟಿ ಬಂದು ಪ್ರೇಮಿಸೋಣ
ಹುಟ್ಟು ಸಾವು ಮೀರಿ ನಿಂತು ಪ್ರೇಮಿಸೋಣ
ನಾನು ನೀನು ಜೋಡಿಯಾಗಿ ಜೀವಿಸೋಣ........
........
........
ಮಧುರ ಪ್ರೇಮವೇ ಅಮರವಂತೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ